ADVERTISEMENT

Bihar Elections | ಮತ ಎಣಿಕೆಗೆ ಕ್ಷಣಗಣನೆ: ಯಾರಿಗೆ ಅಧಿಕಾರ?; ಇಂದು ನಿರ್ಧಾರ

ಅಭಯ್ ಕುಮಾರ್
Published 13 ನವೆಂಬರ್ 2025, 23:05 IST
Last Updated 13 ನವೆಂಬರ್ 2025, 23:05 IST
   

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಒಂದೆಡೆ ಕ್ಷಣಗಣನೆ ಶುರುವಾಗಿದೆ. ಮತ್ತೊಂದೆಡೆ, ಚುನಾವಣೆ ಮುಗಿಸಿ ಈವರೆಗೆ ವಿಶ್ರಾಂತಿ ತೆಗೆದುಕೊಂಡಿರುವ ಅಭ್ಯರ್ಥಿಗಳಲ್ಲಿ ಈಗ ಆತಂಕ ಮನೆ ಮಾಡಿದೆ.

ಈ ನಡುವೆ, ಎನ್‌ಡಿಎದ ಪ್ರಮುಖ ಅಂಗಪಕ್ಷವಾಗಿರುವ ಜೆಡಿಯು ಕಾರ್ಯಕರ್ತರಲ್ಲಿ ಉತ್ಸಾಹ ಮೇರೆ ಮೀರಿದೆ. ಪಟ್ನಾದ ಬೀರ್‌ಚಾಂದ್ ಪಟೇಲ್‌ ಮಾರ್ಗದಲ್ಲಿರುವ ಪಕ್ಷದ ಕಚೇರಿ ಹೊರಗೆ ಪಕ್ಷದ ಕಾರ್ಯಕರ್ತರು ‘ಟೈಗರ್‌ ಜಿಂದಾ ಹೈ’ (ಹುಲಿ ಇನ್ನೂ ಬದುಕಿದೆ) ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. 

ಮತದಾನ ನಡೆಯುವುದಕ್ಕೂ ಮೊದಲು ‘ಅಶಕ್ತ ಹಾಗೂ ಅಸ್ವಸ್ಥ’ರಂತೆ ಕಂಡುಬಂದಿದ್ದ ನಿತೀಶ್‌ ಕುಮಾರ್‌ ಅವರು ಕ್ರಮೇಣ ಅತ್ಯುತ್ಸಾಹದಿಂದ ಬೀಗುತ್ತಿದ್ದರು. ಪುಟಿದೇಳುವ ಮೂಲಕ ಗಮನ ಸೆಳೆದಿದ್ದರು. ಇದು, ಕಾರ್ಯಕರ್ತರಲ್ಲಿ ಉತ್ಸಾಹ ಕಂಡುಬರಲು ಕಾರಣ.

ADVERTISEMENT

ಮತ್ತೊಂದೆಡೆ, ಎಲ್ಲ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎಗೆ ನಿಚ್ಚಳ ಬಹುಮತ ಸಿಗಲಿದೆ ಹಾಗೂ ನಿತೀಶ್‌ ಕುಮಾರ್‌ ಅವರು ಸತತ ಐದನೇ ಬಾರಿಗೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಿರುವುದು ಕೂಡ ಜೆಡಿಯು ಕಾರ್ಯಕರ್ತರಲ್ಲಿನ ಸಂಭ್ರಮಕ್ಕೆ ಮತ್ತೊಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಇದೇ ಮಾರ್ಗದಲ್ಲಿ ಆರ್‌ಜೆಡಿ ಕಚೇರಿಯೂ ಇದೆ. ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಹಾಗೂ ಕಾರ್ಯಕರ್ತರು ಮಾತ್ರ ಚುನಾವಣಾ ಫಲಿತಾಂಶದ ಬಗ್ಗೆ ಆಶಾಭಾವ ಹೊಂದಿದ್ದರೂ, ಬಹಳ ಎಚ್ಚರಿಕೆಯ ನಡೆ ತೋರಲು ನಿರ್ಧರಿಸಿದ್ದಾರೆ.

ಅಚ್ಚರಿಯ ವಿಷಯವೆಂದರೆ, ಎನ್‌ಡಿಎ ಹಾಗೂ ‘ಇಂಡಿಯಾ’ ಮೈತ್ರಿಕೂಟ ಎರಡೂ ಪಾಳಯಗಳು ನೂರಾರು ಕೆ.ಜಿ ಸಿಹಿ ಹಾಗೂ ಹೂವುಗಳು/ಹೂಗುಚ್ಛಗಳ ಪೂರೈಕೆಗೆ ಬೇಡಿಕೆ ಇಟ್ಟಿವೆ.

ಚುನಾವಣೆ ಫಲಿತಾಂಶ ಕುರಿತಂತೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ವಕ್ತಾರೆ ಪ್ರಿಯಾಂಕಾ ಭಾರ್ತಿ, ‘ನಾವು ನಿಖರವಾದ ಸಮೀಕ್ಷೆಯನ್ನು ನಂಬುತ್ತೇವೆಯೇ ಹೊರತು ಮತಗಟ್ಟೆ ಸಮೀಕ್ಷೆಗಳನ್ನಲ್ಲ’ ಎಂದು ಹೇಳಿದ್ದಾರೆ.

ಕೊನೆಯ ಮತ ಎಣಿಕೆ ಪೂರ್ಣಗೊಳ್ಳುವವರೆಗೂ ಎಣಿಕೆ ಕೇಂದ್ರಗಳ ಮುಂದೆ ಕಾವಲಿರುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಈ ಬಾರಿ ಮತ ಕಳ್ಳತನಕ್ಕೆ ಅವಕಾಶ ನೀಡುವುದಿಲ್ಲ.
– ಪ್ರಿಯಾಂಕಾ ಭಾರ್ತಿ, ಆರ್‌ಜೆಡಿ ವಕ್ತಾರೆ
ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದೇ ಮತಗಟ್ಟೆ ಸಮೀಕ್ಷೆಗಳ ಮುಖ್ಯ ಉದ್ದೇಶ. ಆದರೆ ದಾಖಲೆ ಪ್ರಮಾಣದ ಮತ ಚಲಾವಣೆಯು ಜನರು ಬದಲಾವಣೆ ಬಯಸಿರುವುದನ್ನು ಸೂಚಿಸುತ್ತದೆ.
– ತೇಜಸ್ವಿ ಯಾದವ್, ಆರ್‌ಜೆಡಿ ಮುಖ್ಯಸ್ಥ

ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಕಣ

ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ‘ಇಂಡಿಯಾ’ ಒಕ್ಕೂಟಗಳ ನಡುವೆ ನೇರ ಹಾಗೂ ತುರುಸಿನ ಸ್ಪರ್ಧೆ ಕಂಡುಬಂದಿತ್ತು. ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಮಾತ್ರ ಎಲ್ಲ ಮತಗಟ್ಟೆ ಸಮೀಕ್ಷೆಗಳನ್ನು ತಳ್ಳಿಹಾಕಿದ್ದಾರೆ.

‘ಎರಡನೇ ಹಂತದ ಮತದಾನದ ವೇಳೆ ಜನರು ಮತ ಚಲಾಯಿಸಲು ಇನ್ನೂ ಸರದಿಯಲ್ಲಿ ನಿಂತಿದ್ದರು. ಅದೇ ವೇಳೆ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ಬಹಿರಂಗಪಡಿಸಲಾಗಿದೆ’ ಎನ್ನುವ ಮೂಲಕ ತಮ್ಮ ಸಮರ್ಥನೆ ನೀಡುತ್ತಾರೆ.

‘ಇಂಡಿಯಾ’ ಮೈತ್ರಿಕೂಟಕ್ಕೆ ಹಿಂದಿಯಲ್ಲಿ ಮಹಾಘಟನಬಂಧನ ಎನ್ನಲಾಗುತ್ತದೆ. ಆರ್‌ಜೆಡಿ ಕಾಂಗ್ರೆಸ್‌ ಸಿಪಿಐ–ಎಂಎಲ್‌ಸಿಪಿಐ ಸಿಪಿಎಂ ಹಾಗೂ ವಿಐಪಿ ಈ ಒಕ್ಕೂಟದ ಅಂಗಪಕ್ಷಗಳು. ಇನ್ನೊಂದೆಡೆ ಜೆಡಿಯು ಬಿಜೆಪಿ ಎಲ್‌ಜೆಪಿ ಎಚ್‌ಎಂ ಹಾಗೂ ಆರ್‌ಎಲ್‌ಎಂ ಪಕ್ಷಗಳು ಎನ್‌ಡಿಎ ಭಾಗವಾಗಿದ್ದು ಎರಡೂ ಪಾಳಯಗಳು ಬಿರುಸಿನ ಪ್ರಚಾರ ನಡೆಸಿದ್ದವು.

ರಾಘೋಪುರ ತಾರಾಪುರದತ್ತ ಎಲ್ಲರ ಚಿತ್ತ

ಬಿಹಾರದಲ್ಲಿ ಯಾರ ಕೈಗೆ ಅಧಿಕಾರದ ಚುಕ್ಕಾಣಿ ಸಿಗಲಿದೆ ಎಂಬ ಕುತೂಹಲಕ್ಕೆ ಶುಕ್ರವಾರ ತೆರೆ ಬೀಳಲಿದೆ. ಅದರೆ ಎಲ್ಲರ ಚಿತ್ತ ರಾಘೋಪುರ ಹಾಗೂ ತಾರಾಪುರದ ಫಲಿತಾಂಶದತ್ತ ಇರಲಿದೆ. ಈ ಕ್ಷೇತ್ರಗಳಲ್ಲಿ ಕ್ರಮವಾಗಿ ತೇಜಸ್ವಿ ಯಾದವ್‌ ಹಾಗೂ ಡಿಸಿಎಂ ಬಿಜೆಪಿಯ ಸಾಮ್ರಾಟ್‌ ಚೌಧರಿ ಸ್ಪರ್ಧಿಸಿರುವುದು ಈ ಕುತೂಹಲಕ್ಕೆ ಕಾರಣ.

ಬೇರೆ ಬೇರೆ ಕಾರಣಗಳಿಂದಾಗಿ ಪ್ರಸಕ್ತ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್‌ ಹಾಗೂ ರಾಬ್ಡಿ ದೇವಿ ಅವರು ಸ್ಪರ್ಧಿಸಿರಲಿಲ್ಲ. ನಿತೀಶ್‌ ಕುಮಾರ್‌ ಹಾಗೂ ರಾಬ್ಡಿ ದೇವಿ ಅವರು ಈಗಾಗಲೇ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಮತ ಎಣಿಕೆ ಪ್ರಕ್ರಿಯೆ ವಿವರ

  • ಎಣಿಕೆ ಪ್ರಕ್ರಿಯೆ ಆರಂಭ; ಬೆಳಿಗ್ಗೆ 8ಕ್ಕೆ

  • ಇವಿಎಂ ಮತಗಳ ಎಣಿಕೆ ಆರಂಭ: ಬೆಳಿಗ್ಗೆ 8.30

  • ಟೇಬಲ್‌ಗಳ ಸಂಖ್ಯೆ; 4372

  • ಮತ ಎಣಿಕೆ ವೀಕ್ಷಕರು; 243

ಇವಿಎಂನಲ್ಲಿನ ಮತ ಎಣಿಕೆ

  • ಆಯಾ ಸುತ್ತುಗಳವಾರು ಕಂಟ್ರೋಲ್‌ ಯುನಿಟ್‌ಗಳನ್ನು ಕೌಂಟಿಂಗ್‌ ಟೇಬಲ್‌ಗೆ ತರಲಾಗುತ್ತದೆ. ಅವುಗಳನ್ನು ಕೌಂಟಿಂಗ್‌ ಏಜೆಂಟ್‌ಗಳಿಗೆ ತೋರಿಸಲಾಗುತ್ತದೆ. ಕಂಟ್ರೋಲ್‌ ಯುನಿಟ್‌ಗಳಿಗೆ ಹಾಕಲಾದ ಮೊಹರು ಭದ್ರವಾಗಿದೆ ಹಾಗೂ ಫಾರ್ಮ್‌17ಸಿ(ಭಾಗ 1)ಯಲ್ಲಿ ದಾಖಲಾದ ವಿವರಗಳೊಂದಿಗೆ ಅನುಕ್ರಮ ಸಂಖ್ಯೆ ಹೊಂದುತ್ತದೆಯೇ ಎಂಬುದನ್ನು ಏಜೆಂಟರು ಪರಿಶೀಲಿಸಿ ದೃಢಪಡಿಸುವುದು ಇದರ ಉದ್ದೇಶ

  • ಇವಿಎಂನಲ್ಲಿ ದಾಖಲಾದ ಮತಗಳು ಹಾಗೂ ಫಾರ್ಮ್‌17ಸಿಯಲ್ಲಿ ನಮೂದಿಸಿದ ಮತಗಳ ಸಂಖ್ಯೆಯನ್ನು ತಾಳೆ ನೋಡಲಾಗುವುದು

  • ಯಾವುದೇ ಸುತ್ತಿನಲ್ಲಿ ಒಂದು ವೇಳೆ ಮತಗಳ ಸಂಖ್ಯೆ ಹೊಂದಾಣಿಕೆಯಾಗದಿದ್ದಲ್ಲಿ ಸಂಬಂಧಪಟ್ಟ ಮತಗಟ್ಟೆಯ ವಿವಿಪ್ಯಾಟ್‌ ಸ್ಲಿಪ್‌ಗಳ ಎಣಿಕೆ ಮಾಡಲಾಗುವುದು

  • ಇವಿಎಂ ಕೌಂಟಿಂಗ್‌ ಪೂರ್ಣಗೊಂಡ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದ ಯಾವುದಾದರೂ ಐದು ಮತಗಟ್ಟೆಗಳನ್ನು ಆಯ್ಕೆ ಮಾಡಿ ಅವುಗಳ ವಿವಿಪ್ಯಾಟ್‌ಗಳನ್ನು ಪರಿಶೀಲಿಸಿ ದೃಢೀಕರಿಸಲಾಗುವುದು

  • ಪ್ರತಿ ಟೇಬಲ್‌ಗೆ ಒಬ್ಬರು ಮತ ಎಣಿಕೆ ಮೇಲ್ವಿಚಾರಕ ಮತ ಎಣಿಕೆ ಸಹಾಯಕ ಹಾಗೂ ಸೂಕ್ಷ್ಮ ವೀಕ್ಷಕರು ಇರುತ್ತಾರೆ

  • ಎಲ್ಲ ಪಕ್ಷಗಳ ಅಭ್ಯರ್ಥಿಗಳಿಂದ ನೇಮಕಗೊಂಡಿರುವ ಏಜೆಂಟರ ಸಂಖ್ಯೆ ಕನಿಷ್ಠ 18 ಸಾವಿರ

  • ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ನಡೆಯುತ್ತದೆ. ಕೊನೆಯ ಇವಿಎಂಗಿಂತಲೂ ಮೊದಲ ಸುತ್ತಿನ ಎಣಿಕೆ ಪೂರ್ಣಗೊಳ್ಳುವುದಕ್ಕೂ ಮುನ್ನ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ಮುಕ್ತಾಯಗೊಳ್ಳುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.