
ಸಮಷ್ಠಿಪುರ(ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಹಿಂದಿನ ಎಲ್ಲ ಚುನಾವಣಾ ದಾಖಲೆಗಳನ್ನು ಮುರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದರು.
ಸಮಸ್ತಿಪುರ ಮತ್ತು ಬೆಗುಸರಾಯ್ ಜಿಲ್ಲೆಗಳಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಗುಜರಾತ್‌ನಲ್ಲಿ 30 ವರ್ಷಗಳಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅಲ್ಲಿ ಕಳೆದ ವರ್ಷದ ಚುನಾವಣೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಾಗಿತ್ತು. ಅದೇ ರೀತಿ ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲೂ ದಾಖಲೆಗಳನ್ನು ಮುರಿಯಲಾಗಿದೆ. ಬಿಹಾರದಲ್ಲೂ ಅದೇ ರೀತಿಯ ಫಲಿತಾಂಶ ಬರಲಿದೆ ಎಂಬ ವಿಶ್ವಾಸವಿದೆ’ ಎಂದರು.
ವಿರೋಧ ಪಕ್ಷಗಳ ‘ಮಹಾಘಟಬಂಧನ್’ ಅನ್ನು ‘ಮಹಾಲಟ ಬಂಧನ್’ (ಬಡಿಗೆಗಳಲ್ಲಿ ಬಡಿದಾಡಿಕೊಳ್ಳುವವರ ಕೂಟ) ಎಂದು ಟೀಕಿಸಿದ ಪ್ರಧಾನಿ, ಈ ಮೈತ್ರಿ ಕೂಟದಲ್ಲಿರುವ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಮಹಾ ಭ್ರಷ್ಟರಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ದೂರಿದರು.
‘ನಿಮ್ಮ ಬಳಿ ಇರುವ ಮೊಬೈಲ್ ಲೈಟ್ ಅನ್ನು ಆನ್ ಮಾಡಿ’ ಎಂದರು. ಲೈಟ್‌ಗಳು ಆನ್ ಆದ ಬಳಿಕ, ‘ನಮ್ಮ ಸುತ್ತಲೂ ಇಷ್ಟೊಂದು ಬೆಳಕಿರುವಾಗ ಲಾಟೀನು (ಆರ್‌ಜೆಡಿ ಚಿಹ್ನೆ) ಏಕೆಬೇಕು’ ಎಂದು ಪ್ರಶ್ನಿಸಿದರು.
‘ಆರ್‌ಜೆಡಿ ಅಧಿಕಾರಕ್ಕೆ ಬಂದರೆ ಪುನಃ ಜಂಗಲ್ ರಾಜ್ ಬಂದಂತೆ. ಹಿಂದೆ ಅವರ ಅಡಳಿತಾವಧಿಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದವರು ಮಹಿಳೆಯರು. ಹೀಗಾಗಿ ಮತ್ತೆ ಜಂಗಲ್ ರಾಜ್ ಬಾರದಂತೆ ಎಚ್ಚರವಹಿಸಿ’ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.
243 ಸಂಖ್ಯಾಬಲದ ಬಿಹಾರ ವಿಧಾನಸಭಾ ಚುನಾವಣೆಗೆ ನ.6 ಹಾಗೂ ನ.11ರಂದು ಎರಡು ಹಂತದಲ್ಲಿ ಚುನಾವಣೆ ಜರುಗಲಿದೆ. ನ.14ರಂದು ಫಲಿತಾಂಶ ಘೋಷಣೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.