ADVERTISEMENT

ಬಿಹಾರ ಚುನಾವಣೆ 2025: ರಾಹುಲ್‌ 12, ಪ್ರಿಯಾಂಕಾ 8 ರ‍್ಯಾಲಿಗಳಲ್ಲಿ ಭಾಗಿ

ಪಿಟಿಐ
Published 28 ಅಕ್ಟೋಬರ್ 2025, 13:50 IST
Last Updated 28 ಅಕ್ಟೋಬರ್ 2025, 13:50 IST
   

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರದಿಂದ ಸುಮಾರು ಒಂದು ಡಜನ್‌ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಎಂಟು ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. 

ಕೆಲವು ರ‍್ಯಾಲಿಗಳಲ್ಲಿ ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಅವರೊಂದಿಗೆ ರಾಹುಲ್‌ ಜಂಟಿ ಪ್ರಚಾರ ನಡೆಸಲಿದ್ದಾರೆ. ಪ್ರಿಯಾಂಕಾ ಅವರು ನವೆಂಬರ್‌ 1ರಂದು ಬಚ್ವಾರದಿಂದ ತಮ್ಮ ಪ್ರಚಾರ ಆರಂಭಿಸುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಸಿಪಿಐ ಪರಸ್ಪರ ಸ್ಪರ್ಧಿಸುತ್ತಿವೆ. 

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಕ್ಟೋಬರ್‌ 31ರಿಂದ ನವೆಂಬರ್‌ 5ರ ನಡುವೆ ಮೂರು ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್‌ ರಾಮ್‌ ಕಣಕ್ಕಿಳಿದಿರುವ ಕುಟುಂಬ (ಮೀಸಲು) ಕ್ಷೇತ್ರ, ಕುಚೈಕೋಟ್ ಮತ್ತು ಅಮರ್‌ಪುರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. 

ADVERTISEMENT

ರಾಹುಲ್ ಅವರು ಮುಜಫರ್‌ಪುರದ ಸಕ್ರಾ ವಿಧಾನಸಭಾ ಕ್ಷೇತ್ರದಿಂದ ತೇಜಸ್ವಿ ಅವರೊಂದಿಗೆ ತಮ್ಮ ಪ್ರಚಾರ ಪ್ರಾರಂಭಿಸಲಿದ್ದಾರೆ. ನಂತರ ದರ್ಭಂಗಾದಲ್ಲಿ ಮತ್ತೊಂದು ರ‍್ಯಾಲಿ ನಡೆಸಲಿದ್ದಾರೆ. ನವೆಂಬರ್ 7ರವರೆಗೆ 10 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.