
ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಬಿಜೆಪಿ ನಾಯಕ ಅಮಿತ್ ಶಾ.
ನವದೆಹಲಿ: ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೂ ಮುನ್ನ ಜೆಡಿ(ಯು) ನಾಯಕರಾದ ಸಂಜಯ್ ಝಾ ಮತ್ತು ಲಲನ್ ಸಿಂಗ್ ಅವರು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಅಮಿತ್ ಶಾ ಅವರ ನಿವಾಸದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಭಾಗವಹಿಸಿದ್ದರು. ಬಿಜೆಪಿ ಸೇರಿದಂತೆ ಮೈತ್ರಿ ಪಕ್ಷಗಳಿಗೆ ಸಚಿವ ಸ್ಥಾನಗಳ ಹಂಚಿಕೆ ಮತ್ತು ವಿಧಾನಸಭಾ ಅಧ್ಯಕ್ಷರ ಆಯ್ಕೆ ಸೇರಿದಂತೆ ಹಲವು ವಿಚಾರಗಳು ಬಗ್ಗೆ ಚರ್ಚೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಜೆಡಿ(ಯು) ಪಕ್ಷದ ಮುಖ್ಯಸ್ಥರಾಗಿರುವ ನಿತೀಶ್ ಕುಮಾರ್ ಅವರು ನಾಳೆ (ನ.19) ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಿತೀಶ್ ಕುಮಾರ್ 10ನೇ ಬಾರಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಚಿವ ಸಂಪುಟದ ನೂತನ ಸಚಿವರು ಕೂಡ ಇದೇ ವೇದಿಕೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವು ಎನ್‌ಡಿಎ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ 202 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತು. ಬಿಜೆಪಿ 89 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಿತೀಶ್ ಕುಮಾರ್ ನೇತೃತ್ವದ ಜೆಡಿಯು 85 ಸ್ಥಾನಗಳು, ಕೇಂದ್ರ ಸಚಿವ ಚಿರಾಗ್ ಪಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) 19 ಸ್ಥಾನಗಳು, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ 05 ಸ್ಥಾನಗಳು, ಉಪೇಂದ್ರ ಕುಶ್ವಾಹಾ ನೇತೃತ್ವದ ರಾಷ್ಟ್ರೀಯ ಲೋಕ ಮೋರ್ಚಾ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿತು.
ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಕೇವಲ 34 ಸ್ಥಾನಗಳನ್ನು ಪಡೆಯಿತು. ಆರ್‌ಜೆಡಿ 25 ಸ್ಥಾನಗಳು, ಕಾಂಗ್ರೆಸ್ 6 ಸ್ಥಾನಗಳು, ಸಿಪಿಐ(ಎಂಎಲ್) 2, ಸಿಪಿಐ 1 ಸ್ಥಾನವನ್ನು ಪಡೆಯಿತು.
ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ಹೊರತಾಗಿ ಒವೈಸಿ ನೇತೃತ್ವದ AIMIM 5 ಸ್ಥಾನಗಳನ್ನು ಪಡೆದರೆ, ಬಿಎಸ್‌ಪಿ ಹಾಗೂ ಐಐಪಿ ತಲಾ ಒಂದು ಸ್ಥಾನವನ್ನು ಪಡೆದವು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.