ಮುಖ್ಯಮಂತ್ರಿ ನಿತೀಶ್ ಕುಮಾರ್
–ಪಿಟಿಐ ಚಿತ್ರ
ಪಟ್ನಾ: ಶಿಕ್ಷಣ ಇಲಾಖೆ ಎರಡು ದಿನಗಳ ಹಿಂದೆ ಕರೆದಿದ್ದ ಪರಿಶೀಲನಾ ಸಭೆಗೆ ಗೈರಾದ ಬಿಹಾರದ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ವೇತನವನ್ನು ಬಿಹಾರ ಸರ್ಕಾರ ತಡೆಹಿದಿದೆ. ಅಲ್ಲದೆ ಅವರು ಪ್ರತಿನಿಧಿಸುವ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳ ಬ್ಯಾಂಕ್‌ಗಳ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ.
ವಿಶ್ವವಿದ್ಯಾಲಯಗಳಲ್ಲಿನ ಬಾಕಿ ಪರೀಕ್ಷೆಗಳ ಸ್ಥಿತಿಗತಿ ಮತ್ತು ಇತರ ವಿಷಯಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ಸಭೆಗೆ ಹಾಜರಾಗದಿರುವುದಕ್ಕೆ ಕಾರಣ ನೀಡಿ ಎಂದು ಇಲಾಖೆಯು ಕುಲಪತಿಗಳಿಗೆ ಪತ್ರ ಬರೆದಿದೆ.
‘ಎರಡು ದಿನಗಳೊಳಗೆ ಕುಲಪತಿಗಳು ತೃಪ್ತಿದಾಯಕ ಉತ್ತರ ನೀಡದಿದ್ದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ’ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. ಈ ಕುರಿತು ಶಿಕ್ಷಣ ಕಾರ್ಯದರ್ಶಿ ಬೈದ್ಯನಾಥ್ ಯಾದವ್ ಅವರು ಪತ್ರ ಹೊರಡಿಸಿದ್ದು, ಮಗಧ್ ವಿಶ್ವವಿದ್ಯಾಲಯ ಮತ್ತು ಕಾಮೇಶ್ವರ ಸಿಂಗ್ ದರ್ಭಾಂಗ್ ಸಂಸ್ಕೃತ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದ ಎಲ್ಲ ಸರ್ಕಾರಿ ವಿ.ವಿಗಳ ಪರೀಕ್ಷಾ ನಿಯಂತ್ರಕರಿಗೂ ರವಾನಿಸಲಾಗಿದೆ.
‘ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆಗಳ ಬಾಕಿ ಅಥವಾ ವಿಳಂಬದಂತಹ ಮಹತ್ವದ ವಿಷಯಗಳ ಕುರಿತು ಚರ್ಚಿಸಲು ಕರೆಯಲಾದ ಸಭೆಗೆ ಕುಲಪತಿಗಳು ಗೈರಾಗಿದ್ದನ್ನು ಇಲಾಖೆಯು ಗಂಭೀರವಾಗಿ ತೆಗೆದುಕೊಂಡಿದೆ. ಕುಲಪತಿಗಳು ಸಾರ್ವಜನಿಕರ ಸೇವಕರಾಗಿದ್ದು, ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವಿಫಲರಾಗಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಿಹಾರ ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ಲಭ್ಯರಾಗಲಿಲ್ಲ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಪರಿಶೀಲನಾ ಸಭೆಗಳಿಗೆ ಗೈರಾಗಿದ್ದರು ಹಾಗೂ ತಮ್ಮ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳನ್ನು ಪರಿಶೀಲಿಸುವಲ್ಲಿ ವಿಫಲರಾಗಿದ್ದರು ಎಂದು ಮುಜಾಫರ್‌ಪುರದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದ ಕುಲಪತಿ ಮತ್ತು ಸಹ ಕುಲಪತಿ ಅವರ ವೇತನವನ್ನು ರಾಜ್ಯ ಸರ್ಕಾರ ತಡೆಹಿಡಿದಿತ್ತು. ಅಲ್ಲದೆ ಅಲ್ಲಿನ ಉನ್ನತ ಅಧಿಕಾರಿಗಳು ಮತ್ತು ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಗಳನ್ನೂ ಸ್ಥಗಿತಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.