
ಪಟ್ನಾ: ಬಿಹಾರದ ಹಿರಿಯ ಸಚಿವ ಅಶೋಕ್ ಚೌಧರಿ ಅವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಿಸುವ ಪ್ರಕ್ರಿಯೆಗೆ ಅಲ್ಲಿನ ಶಿಕ್ಷಣ ಇಲಾಖೆ ತಡೆ ನೀಡಿದೆ.
ನಿತೀಶ್ ಸರ್ಕಾರದ ಭಾಗವಾಗಿರುವ ಅಶೋಕ್(56) ಅವರು ಕಳೆದ ವರ್ಷ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿದ್ದರು.
‘ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳ ಬಗ್ಗೆ ಪರಿಶೀಲನಾ ಸಭೆ ನಡೆಸಲಾಯಿತು. ಅಶೋಕ್ ಶೈಕ್ಷಣಿಕ ದಾಖಲೆಗಳಲ್ಲಿ ವ್ಯತ್ಯಾಸಗಳಿರುವುದರಿಂದ ಅವರ ದಾಖಲೆಗಳನ್ನು ಮರುಪರಿಶೀಲನೆಗಾಗಿ ಬಿಹಾರ ರಾಜ್ಯ ವಿಶ್ವವಿದ್ಯಾಲಯ ಸೇವಾ ಆಯೋಗಕ್ಕೆ (ಬಿಎಸ್‌ಯುಎಸ್‌ಸಿ) ಕಳುಹಿಸಲಾಗಿದೆ’ ಎಂದು ಶಿಕ್ಷಣ ಸಚಿವ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.
‘ಚೌಧರಿ ನೀಡಿರುವ ದಾಖಲೆಗಳಲ್ಲಿ ಅವರ ಹೆಸರು ಎರಡು ರೀತಿಯಲ್ಲಿದೆ. ಅವರ ಶೈಕ್ಷಣಿಕ ದಾಖಲೆಗಳಲ್ಲಿ ಅಶೋಕ್ ಕುಮಾರ್ ಎಂಬುವುದಾಗಿ ಇದೆ ಆದರೆ ಚುನಾವಣಾ ಅಫಿಡವಿಟ್‌ನಲ್ಲಿ ಅಶೋಕ್ ಚೌಧರಿ ಎಂದು ಹೆಸರಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಯುವಜನತೆ ಉದ್ಯೋಗದ ನಿರೀಕ್ಷೆಯಲ್ಲಿರುವಾಗ, 50 ವರ್ಷ ವಯಸ್ಸು ದಾಟಿರುವ ಸಚಿವ ಚೌಧರಿ ಅವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಿಸಿರುವುದಕ್ಕೆ ವಿರೋಧ ಪಕ್ಷಗಳು ನಿತೀಶ್ ಸರ್ಕಾರವನ್ನು ಟೀಕಿಸಿದ್ದವು.