ADVERTISEMENT

ನಾನು ಶಿರಡಿ ಸಾಯಿ ಬಾಬಾರ ಪವಾಡವನ್ನು ಕಣ್ಣಾರೆ ಕಂಡೆ: ಲಾಲೂ ಪುತ್ರ ತೇಜ ಪ್ರತಾಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2022, 11:33 IST
Last Updated 13 ಅಕ್ಟೋಬರ್ 2022, 11:33 IST
ತೇಜ್ ಪ್ರತಾಪ್ ಯಾದವ್
ತೇಜ್ ಪ್ರತಾಪ್ ಯಾದವ್    

ಪಟ್ನಾ: ದೇವರ ಮೇಲೆ ಬಹಳ ನಂಬಿಕೆಯನ್ನು ಹೊಂದಿರುವ ಬಿಹಾರದ ಆರ್‌ಜೆಡಿ ನಾಯಕ ಹಾಗೂ ಪ್ರಸ್ತುತ ಅರಣ್ಯ ಸಚಿವ ತೇಜ್ ಪ್ರತಾಪ್ ಯಾದವ್ ಅವರು ತಮ್ಮ ವಿಚಿತ್ರ ಹೇಳಿಕೆಗಳಿಂದಲೂ ಆಗಾಗ ಗಮನ ಸೆಳೆಯುತ್ತಿರುತ್ತಾರೆ.

ಆರ್‌ಜೆಡಿ ಪರಮೋಚ್ಚ ನಾಯಕ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರರಾಗಿರುವ ತೇಜ್ ಪ್ರತಾಪ್ ಅವರಿಗೆ ದೇವರ ಮೇಲೆ ಎಷ್ಟು ಭಕ್ತಿಯಿದೆ ಎಂದರೆ ಪಾಟ್ನಾ ಮನೆಯಲ್ಲಿ ಮೂರು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಪೂಜಾರಿಗಳನ್ನು ನೇಮಿಸಿದ್ದಾರೆ.

ಅದರಲ್ಲಿ ಶಿರಡಿ ಸಾಯಿಬಾಬಾ ಮಂದಿರವೂ ಒಂದು. ಶಿರಡಿ ಸಾಯಿಬಾಬಾ ಅವರ ಭಕ್ತರಾಗಿರುವ ತೇಜ್ ಪ್ರತಾಪ್, ಸಾಯಿಬಾಬಾರ ಪವಾಡವನ್ನು ನಾನು ಅನುಭವಿಸಿದೆ ಎಂದು ಹೇಳಿಕೊಂಡಿದ್ದಾರೆ.

ADVERTISEMENT

‘ನವರಾತ್ರಿ ದಿನ ಮನೆಯಲ್ಲಿ ಟಿವಿಯಲ್ಲಿ ಶಿರಡಿ ಸಾಯಿವಾಲೆ ಧಾರಾವಾಹಿಯನ್ನು ನೋಡುವಾಗ ನಾನು ಸಾಯಿಬಾಬಾ ಅವರ ಪವಾಡಗಳನ್ನೂ ನೋಡಿದೆ. ಸಾಯಿಬಾಬಾ ಅವರು, ಪವಿತ್ರ ಬೂದಿಯಿಂದ ದೆವ್ವ ಹಿಡಿದರಿಗೆ ದೆವ್ವ ಬಿಡಿಸುತ್ತಿದ್ದರು. ನಾನು ಮನದಲ್ಲಿ ಸಾಯಿಬಾಬಾ ಹಾಗೂ ಅವರ ಬೂದಿಯನ್ನು ಸ್ಮರಿಸಿ ಮಲಗಿದೆ. ಮರುದಿನ ನನ್ನ ಕಚೇರಿಗೆ ಹೋದಾಗ ನಾನು ಟಿವಿಯಲ್ಲಿ ನೋಡಿದ ಸಾಯಿಬಾಬಾರ ಪವಿತ್ರ ಬೂದಿ ನನ್ನ ಟೇಬಲ್ ಮೇಲೆ ಇತ್ತು’ ಎಂದು ತೇಜ್ ತಿಳಿಸಿದ್ದಾರೆ.

‘ಟೇಬಲ್ ಮೇಲಿನ ಪವಿತ್ರ ಬೂದಿಯನ್ನು ಕಂಡು ನಾನು ಮೂಕವಿಸ್ಮಿತನಾದೆ. ನಿಜವಾಗಿಯೂ ಇದು ಸಾಯಿಬಾಬಾ ಅವರ ಪವಾಡ. ನಾನು ಹಿಂದಿನ ದಿನ ಸಾಯಿಬಾಬಾ ಅವರ ಪವಿತ್ರ ಬೂದಿಯ ಬಗ್ಗೆ ಸ್ಮರಿಸಿದ್ದೇ ಇದಕ್ಕೆ ಕಾರಣ’ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಸಿಎಂ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಬಿಜೆಪಿ ಸಖ್ಯ ತೊರೆದು ಆರ್‌ಜೆಡಿ ಜೊತೆ ಕೈಜೋಡಿಸಿದ್ದರಿಂದ ಜೆಡಿಯು ಜೊತೆ ಆರ್‌ಜೆಡಿ ಪುನಃ ಬಿಹಾರದಲ್ಲಿ ಅಧಿಕಾರಕ್ಕೇರಿದೆ. ಹೊಸ ಸರ್ಕಾರದಲ್ಲಿ 34 ವರ್ಷ ವಯಸ್ಸಿನ ತೇಜ್ ಪ್ರತಾಪ್‌ ಅರಣ್ಯ ಸಚಿವರಾಗುವ ಮೂಲಕ ರಾಜಕೀಯದಲ್ಲಿ ಮತ್ತೊಂದು ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.