ADVERTISEMENT

ಪೊಲೀಸ್‌ ಸಿಬ್ಬಂದಿಗೆ ಬಸ್ಕಿ ಶಿಕ್ಷೆ ಕೊಟ್ಟಿದ್ದ ಕೃಷಿ ಅಧಿಕಾರಿಗೆ ಬಡ್ತಿ 

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 13:02 IST
Last Updated 26 ಏಪ್ರಿಲ್ 2020, 13:02 IST
   

ಪಾಟ್ನಾ: ವಾಹನ ಪಾಸ್‌ ಕೇಳಿದ್ದ ಹೋಮ್‌ ಗಾರ್ಡ್‌ ಸಿಬ್ಬಂದಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದ ಕೃಷಿ ಅಧಿಕಾರಿಗೆ ಬಿಹಾರ ಸರ್ಕಾರ ಬಡ್ತಿ ನೀಡಿದೆ.

ಬಿಹಾರದ ಅರಾರಿಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೋಮ್‌ ಗಾರ್ಡ್‌ ಗಣೇಶ್‌ ಲಾಲ್‌ ಎಂಬುವವರು ಅದೇ ದಾರಿಯಲ್ಲಿ ಬಂದಿದ್ದ ಕೃಷಿ ಅಧಿಕಾರಿ ಮನೋಜ್‌ ಕುಮಾರ್‌ ಅವರ ಕಾರನ್ನು ತಡೆದು, ವಾಹನ ಪಾಸ್‌ ಕೇಳಿದ್ದರು. ಇದರಿಂದ ಕೋಪಗೊಂಡಿದ್ದ ಕೃಷಿ ಅಧಿಕಾರಿ, ಸ್ಥಳದಲ್ಲಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಬೆದರಿಸಿದ್ದರು.

ಸ್ಥಳದಲ್ಲಿದ್ದ ಎಸ್‌ಐ, ಕೃಷಿ ಅಧಿಕಾರಿಯ ಬೆದರಿಕೆ ಹಿನ್ನೆಲೆಯಲ್ಲಿ ಗಣೇಶ್‌ ಲಾಲ್‌ ಅವರಿಗೆ ಬಸ್ಕಿ ಹೊಡೆಯುವಂತೆ ತಿಳಿಸಿದ್ದರು.

ADVERTISEMENT

‘ಅಧಿಕಾರಿಯ ಬಳಿ ಪಾಸ್‌ ಕೇಳಲು ನಿನಗೆಷ್ಟು ಧೈರ್ಯ,’ ಎಂದು ಗಣೇಶ್‌ ಲಾಲ್‌ ಅವರನ್ನು ಎಸ್‌ಐ ಏರು ಧನಿಯಲ್ಲಿ ಪ್ರಶ್ನಿಸುತ್ತಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಬಿಹಾರ ಡಿಜಿಪಿ ಗುಪ್ತೇಶ್ವರ್‌ ಪಾಂಡೆ, ಗಣೇಶ್‌ ಲಾಲ್‌ ಅವರನ್ನು ವೈಯಕ್ತಿಕವಾಗಿ ಕ್ಷಮೆ ಕೋರಿದ್ದರು. ಅಲ್ಲದೆ, ಅವರಿಂದ ಬಸ್ಕಿ ಹೊಡೆಸಿದ್ದ ಸಬ್‌ ಇನ್‌ಸ್ಪೆಕ್ಟರ್‌ ಗೋಂವಿದ್‌ ಸಿಂಗ್‌ ಅವರನ್ನು ಅಮಾನತು ಮಾಡಿದ್ದರು.

ಹೋಮ್‌ ಗಾರ್ಡ್‌ ಗಣೇಶ್‌ ಲಾಲ್‌ ಅವರಿಂದ ಬಸ್ಕಿ ಹೊಡೆಸಿದ ಪ್ರಕರಣವನ್ನು ಸರ್ಕಾರದ ಗಮನಕ್ಕೆ ತಂದು, ಎಲ್ಲರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂಬ ಡಿಜಿಪಿ ಗುಪ್ತಾ ಅವರ ಭರವಸೆ ನಡುವೆಯೇ ಕೃಷಿ ಅಧಿಕಾರಿ ಮನೋಜ್‌ ಕುಮಾರ್‌ಗೆ ಸರ್ಕಾರ ಬಡ್ತಿ ನೀಡಿದೆ.

ಅರಾರಿಯಾ ಜಿಲ್ಲಾ ಕೃಷಿ ಅಧಿಕಾರಿಯಾಗಿರುವ ಮನೋಜ್‌ ಕುಮಾರ್‌ ಅವರನ್ನು ಉಪ ನಿರ್ದೇಶಕ ಸ್ಥಾನಕ್ಕೆ ಬಡ್ತಿ ನೀಡಲಾಗಿದ್ದು, ಪಾಟ್ನಾದ ಮುಖ್ಯ ಕಚೇರಿಗೆ ವರ್ಗ ಮಾಡಲಾಗಿದೆ ಎಂದು ಸರ್ಕಾರ ಶನಿವಾರ ಆದೇಶಿಸಿದೆ. ಇದು ಬಿಹಾರದಲ್ಲಿ ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗಿದೆ.

ಈ ಮಧ್ಯೆ ಮನೋಜ್‌ ಕುಮಾರ್‌ಗೆ ಬಡ್ತಿ ನೀಡಿ ಪಾಟ್ನಾಕ್ಕೆ ವರ್ಗಾವಣೆ ಮಾಡಿದ್ದನ್ನು ಕೃಷಿ ಸಚಿವ ಪ್ರೇಮ್‌ ಕುಮಾರ್‌ ಅವರು ಸಮರ್ಥಿಸಿಕೊಂಡಿದ್ದಾರೆ. ‘ ಮನೋಜ್‌ ಕುಮಾರ್‌ ಅವರನ್ನು ಅರಾರಿಯಾದಿಂದ ಪಾಟ್ನಾಕ್ಕೆ ವರ್ಗಾಯಿಸಲಾಗಿದೆ. ಹೀಗಾಗಿ ಅವರು ತಮ್ಮ ವಿರುದ್ಧದ ಪ್ರಕರಣದಲ್ಲಿ ಪ್ರಭಾವ ಭೀರಲು ಸಾಧ್ಯವಾಗುವುದಿಲ್ಲ. ಪೊಲೀಸ್‌ ಸಿಬ್ಬಂದಿಯಿಂದ ಬಸ್ಕಿ ಹೊಡೆಸಿದ ಅವರ ವರ್ತನೆಯನ್ನು ಸಹಿಸಿಕೊಳ್ಳಲಾಗದು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.