ADVERTISEMENT

ಬಿಹಾರ ಚುನಾವಣೆ: 57 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದ ಜೆಡಿಯು

ಪಿಟಿಐ
Published 15 ಅಕ್ಟೋಬರ್ 2025, 16:38 IST
Last Updated 15 ಅಕ್ಟೋಬರ್ 2025, 16:38 IST
ಜೆಡಿಯು
ಜೆಡಿಯು   

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹಲವು ಸಚಿವರನ್ನು ಒಳಗೊಂಡ 57 ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.

ಸಚಿವರಾದ ವಿಜಯ್‌ ಕುಮಾರ್‌ ಚೌಧರಿ, ಶ್ರವಣ ಕುಮಾರ್‌, ಮದನ್‌ ಸಾಹ್ನಿ, ರತ್ನೇಶ್‌ ಸದಾ, ಮಹೇಶ್ವರ್‌ ಹಜಾರಿ ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಆರ್‌ಜೆಡಿಯನ್ನು ವರ್ಷದ ಹಿಂದೆ ತ್ಯಜಿಸಿ ಜೆಡಿಯುಗೆ ಮರಳಿದ್ದ ಶ್ಯಾಮ್‌ ರಜಾಕ್‌, ರಾಜಕಾರಣಿಯಾಗಿ ಬದಲಾಗಿರುವ ‘ಡಾನ್‌’ ಅನಂತ್‌ ಕುಮಾರ್‌ ಸಿಂಗ್‌ ಹೆಸರೂ ಪಟ್ಟಿಯಲ್ಲಿದೆ. ಈಗಾಗಲೇ ಅನಂತ್‌ ಅವರು ಮೊಕಾಮಾ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. 

ADVERTISEMENT

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಉಮೇಶ್‌ ಕುಶ್ವಾಹ ಅವರನ್ನು ಮಹನಾರ್‌ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಈಗಾಗಲೇ ಕುಶ್ವಾಹ ಸಹ ಮಂಗಳವಾರವೇ ನಾಮಪತ್ರ ಸಲ್ಲಿಸಿದ್ದಾರೆ.

ಮದನ್‌ ಸಾಹ್ನಿ ಅವರನ್ನು ಬದರ್‌ಪುರ ಕ್ಷೇತ್ರದಿಂದ, ರತ್ನೇಶ್‌ ಸದಾ ಅವರನ್ನು ಸೋನ್‌ಬರಸಾದಿಂದ, ಮಹೇಶ್ವರ್‌ ಹಜಾರಿ ಅವರನ್ನು ಕಲ್ಯಾಣಪುರದಿಂದ, ವಿಜಯ್‌ ಕುಮಾರ್‌ ಚೌಧರಿ ಅವರನ್ನು ಸರಾಯರಂಜನ್‌ ನಿಂದ ಹಾಗೂ ಶ್ರವಣ ಕುಮಾರ್‌ ಅವರನ್ನು ನಳಂದ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಪಕ್ಷ ಘೋಷಿಸಿದೆ. 

243 ಸದಸ್ಯರ ಸಾಮರ್ಥ್ಯದ ಬಿಹಾರ ವಿಧಾನಸಭೆಗೆ ನವೆಂಬರ್‌ 6 ಮತ್ತು 11 ರಂದು ಮತದಾನ ನಡೆಯಲಿದ್ದು, ನವೆಂಬರ್‌ 14ರಂದು ಮತ ಎಣಿಕೆ ನಡೆಯಲಿದೆ.

ಪ್ರಶಾಂತ್‌ ಕಿಶೋರ್
ಸೋಲು ಖಚಿತ ಎಂಬುದನ್ನು ಅರಿತಿರುವ ಕಿಶೋರ್‌ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಅಲ್ಲದೆ ಯುದ್ಧಭೂಮಿಗೆ ಹೋಗುವ ಮೊದಲೇ ಸೋಲೊಪ್ಪಿಕೊಂಡಿದ್ದಾರೆ
ಮೃತ್ಯುಂಜಯ ತಿವಾರಿ ಆರ್‌ಜೆಡಿ ವಕ್ತಾರ 
ಚುನಾವಣಾ ಪ್ರಚಾರ ನಿಪುಣ ಕಿಶೋರ್‌ ಅವರಿಗೆ ಬಿಹಾರದಲ್ಲಿ ತಮಗೆ ಪೂರಕ ವಾತಾವರಣ ಇಲ್ಲ ಎಂಬುದು ಮನದಟ್ಟಾಗಿದೆ. ಅಲ್ಲದೆ ಅವರೊಳಗಿನ ವರ್ತಕ ಎಚ್ಚರಗೊಂಡಿದ್ದಾನೆ
ಶೆಹಜಾದ್‌ ಪೂನಾವಾಲಾ ಬಿಜೆಪಿ ರಾಷ್ಟ್ರೀಯ ವಕ್ತಾರ 

ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಪ್ರಶಾಂತ್‌ ಕಿಶೋರ್‌

ಜನ್‌ ಸುರಾಜ್‌ ಪಕ್ಷದ ಸಂಸ್ಥಾಪಕ ಚುನಾವಣಾ ತಂತ್ರಗಾರಿಕೆಯ ನಿಪುಣ ಪ್ರಶಾಂತ್‌ ಕಿಶೋರ್‌ ಅವರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬುಧವಾರ ಘೋಷಿಸಿದರು.

‘ಪಕ್ಷ ಈ ನಿರ್ಧಾರವನ್ನು ತೆಗೆದುಕೊಂಡಿದೆ’ ಎಂದಿರುವ ಅವರು ‘150ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆದ್ದರೆ ಅದನ್ನು ಸೋಲು ಎಂದು ಪರಿಗಣಿಸಲಾಗುತ್ತದೆ’ ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಿಳಿಸಿದರು.  ‘ಬಿಹಾರ ಚುನಾವಣೆಯಲ್ಲಿ ಜನ್‌ ಸುರಾಜ್‌ ಪಕ್ಷ ಗೆದ್ದರೆ ಅದು ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಪರಿಣಾಮ ಬೀರುತ್ತದೆ. ದೇಶದ ರಾಜಕೀಯ ದಿಕ್ಸೂಚಿಯನ್ನೇ ಬದಲಿಸುತ್ತದೆ’ ಎಂದು ಅವರು ಪ್ರತಿಪಾದಿಸಿದರು.  

‘ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಪಕ್ಷ ನಿರ್ಧರಿಸಿದೆ. ಹೀಗಾಗಿಯೇ ರಾಘೋಪುರ ಕ್ಷೇತ್ರದಿಂದ ತೇಜಸ್ವಿ ಯಾದವ್‌ ವಿರುದ್ಧ ಮತ್ತೊಬ್ಬ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಇದು ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ನಿರ್ಧಾರ. ನಾನು ಸ್ಪರ್ಧಿಸಿದ್ದರೆ ಅದು ನನ್ನನ್ನು ಪಕ್ಷದ ಸಂಘಟನಾ ಕೆಲಸದಿಂದ ದೂರವಿಡುತ್ತಿತ್ತು’ ಎಂದು ಕಿಶೋರ್‌ ಹೇಳಿದರು. ‘ನಾವು ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಬಹುದು ಅಥವಾ ಹೀನಾಯ ಸೋಲು ಅನುಭವಿಸಬಹುದು. ಅಂದರೆ 10ಕ್ಕಿಂತ ಕಡಿಮೆ ಅಥವಾ 150ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ನಿರೀಕ್ಷಿಸಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ನಾವು 150ಕ್ಕಿಂತ ಕಡಿಮೆ ಸ್ಥಾನಗಳು ಅಂದರೆ 120 ಅಥವಾ 130 ಬಂದರೂ ಸೋತಂತೆ. ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಬಿಹಾರವನ್ನು ಪರಿವರ್ತಿಸಲು ಮತ್ತು ದೇಶದ 10 ಅತ್ಯಂತ ಮುಂದುವರಿದ ರಾಜ್ಯಗಳ ಸಾಲಿನಲ್ಲಿ ನಿಲ್ಲಿಸಲು ಜನಾದೇಶ ದೊರೆಯುತ್ತದೆ’ ಎಂದು ಅವರು ಹೇಳಿದರು.

‘ಎನ್‌ಡಿಎ ಸೋಲು ಖಚಿತ’: ‘ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಬಿಹಾರದಲ್ಲಿ ಖಚಿತವಾಗಿ ಸೋಲುತ್ತದೆ’ ಎಂದು ಭವಿಷ್ಯ ನುಡಿದಿರುವ ಪ್ರಶಾಂತ್‌ ಕಿಶೋರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು 25 ಸ್ಥಾನಗಳಲ್ಲಿ ಗೆಲ್ಲಲು ಹೆಣಗಾಡುತ್ತದೆ ಎಂದು ಹೇಳಿದ್ದಾರೆ.

ಚುನಾವಣಾ ಸಿಬ್ಬಂದಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ.

‘ಈಸ್ಟ್ ಸಿಂಗ್‌ಭೂಮ್‌’ ಜಿಲ್ಲೆಯ ಘಾಟ್ಸಿಲಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುವ ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು. ಉಪ ಚುನಾವಣೆಯ ಮತದಾನ ನವೆಂಬರ್‌ 11ರಂದು ನಡೆಯಲಿದೆ. ಅಂದು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿಗೆ ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಅಥವಾ ಅಪಘಾತ ಅವಘಡಗಳು ಸಂಭವಿಸಿದರೆ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ನಗದುರಹಿತ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದು ಅವರು ಹೇಳಿದರು. ಈ ಸಂಬಂಧ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕರಣ್‌ ಸತ್ಯಾರ್ಥಿ ಅವರು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಜತೆ ಸಭೆ ನಡೆಸಿದರು ಎಂದು ಪ್ರಕಟಣೆ ತಿಳಿಸಿದೆ.

ಎನ್‌ಡಿಎ ಒಗ್ಗಟ್ಟು ಬಿಹಾರದ ಒಗ್ಗಟ್ಟು: ಮೋದಿ

ನವದೆಹಲಿ: ‘ಎನ್‌ಡಿಎ ಒಗ್ಗಟ್ಟು ಬಿಹಾರದ ಒಗ್ಗಟ್ಟು– ಮತ್ತೊಮ್ಮೆ ಉತ್ತಮ ಸರ್ಕಾರ‌’ ಎಂಬ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಚುನಾವಣೆ ಸಲುವಾಗಿ ನೀಡಿದರು. ಬಿಹಾರ ರಾಜ್ಯದ ಬಿಜೆಪಿ ಕಾರ್ಯಕರ್ತರ ಜತೆಗೆ ‘ನಮೋ ಮೋದಿ’ ಆ್ಯಪ್‌ ಮೂಲಕ ಬುಧವಾರ ಸಂವಾದ ನಡೆಸಿದ ಅವರು ಕೇಂದ್ರ ಮತ್ತು ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರ ಆರಂಭಿಸಿದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು. ‘ಪಕ್ಷದ ಗೆಲುವಿಗೆ ಬೂತ್‌ ಮಟ್ಟದ ಪ್ರತಿ ಕಾರ್ಯಕರ್ತರು ಶ್ರಮಿಸಬೇಕು. ಪ್ರತಿ ಮನೆಯವರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮನದಟ್ಟು ಮಾಡಿಸಬೇಕು’ ಎಂದರು. ‘ಪ್ರತಿ ಬೂತ್‌ ಕಾರ್ಯಕರ್ತರು ಮೋದಿ ಇದ್ದಂತೆ’ ಎಂದ ಅವರು ಅಭಿವೃದ್ಧಿ ಕಾರ್ಯಗಳು ಮತ್ತು ಸೌಲಭ್ಯಗಳ ಬಗ್ಗೆ ವಿಡಿಯೊಗಳನ್ನು ತೋರಿಸುವಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.