ADVERTISEMENT

ಬಿಹಾರ ವಿಧಾನಸಭಾ ಚುನಾವಣೆ| ನಿತೀಶ್‌ ಮೇಲೆ ಕಲ್ಲೆಸೆದ ಯುವಕರು

ಬಿಹಾರ ಚುನಾವಣೆ: ಮೂರನೇ ಹಂತದ ಮತದಾನದ ಕ್ಷೇತ್ರಗಳಲ್ಲಿ ‍ಪ್ರಚಾರ ಜೋರು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 17:31 IST
Last Updated 3 ನವೆಂಬರ್ 2020, 17:31 IST
ನಿತೀಶ್‌ ಕುಮಾರ್‌ ಅವರು ಪಟ್ನಾದ ಮತಗಟ್ಟೆಯೊಂದರಲ್ಲಿ ಮಂಗಳವಾರ ಮತ ಚಲಾಯಿಸಿದರು –ಪಿಟಿಐ ಚಿತ್ರ
ನಿತೀಶ್‌ ಕುಮಾರ್‌ ಅವರು ಪಟ್ನಾದ ಮತಗಟ್ಟೆಯೊಂದರಲ್ಲಿ ಮಂಗಳವಾರ ಮತ ಚಲಾಯಿಸಿದರು –ಪಿಟಿಐ ಚಿತ್ರ   

ಪಟ್ನಾ: ಮಧುಬನಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಮೇಲೆ ದುಷ್ಕರ್ಮಿಗಳು ಮಂಗಳವಾರ ಕಲ್ಲು ಮತ್ತು ಈರುಳ್ಳಿ ಎಸೆದಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿಯ ಮೇಲೆ ಕಲ್ಲೆಸೆದ ಪ್ರಕರಣ ಬಿಹಾರದಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ.

‘ಇನ್ನಷ್ಟು ಎಸೆಯಿರಿ, ಎಷ್ಟು ಬೇಕೋಅಷ್ಟು ಎಸೆಯಿರಿ’ ಎಂದು ನಿತೀಶ್‌ಹೇಳಿದರು. ಕಲ್ಲೆಸೆತದ ತಕ್ಷಣವೇ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಯನ್ನುಸುತ್ತುವರಿದು ನಿಂತರು. ಆದರೆ, ದೂರಸರಿಯುವಂತೆ ಅವರಿಗೆ ನಿತೀಶ್‌ ಸೂಚಿಸಿ ದರು. ವ್ಯಗ್ರಗೊಂಡಿದ್ದ ಯುವಕರ ಜತೆಗೆ ನೇರವಾಗಿ ಮಾತನಾಡುವುದಾಗಿ ಅವರು ಹೇಳಿದರು.

‘10 ಲಕ್ಷ ಉದ್ಯೋಗ ಕೊಡುತ್ತೇನೆ ಎಂದು ಭರವಸೆ ಕೊಟ್ಟವರಿಗೆ ಆಡಳಿತದ ಗಂಧಗಾಳಿಯೇ ಇಲ್ಲ. ಇಂತಹ ದೊಡ್ಡ ಭರವಸೆಗಳಿಂದ ದಾರಿ ತಪ್ಪಬೇಡಿ ಎಂಬುದು ಯುವಜನರಲ್ಲಿ ನನ್ನ ಮನವಿ. ಹಾಗೆಯೇ, ಕಲ್ಲು ತೂರಾಟದಂತಹ ಸಮಾಜವಿರೋಧಿ ಚಟುವಟಿಕೆಯಲ್ಲಿಯೂ ತೊಡಗಬೇಡಿ. ಇದನ್ನು ಕಿವಿಗೆ ಹಾಕಿಕೊಳ್ಳದಿದ್ದರೆ, ನಿಮ್ಮನ್ನು ರಕ್ಷಿಸುವುದು ಯಾರಿಗೂ ಸಾಧ್ಯವಾಗದು’ ಎಂದು ನಿತೀಶ್‌ ಎಚ್ಚರಿಸಿದರು. ತಮ್ಮ ಪ್ರತಿಸ್ಪರ್ಧಿ ತೇಜಸ್ವಿ ಯಾದವ್‌ ಅವರನ್ನು ಉಲ್ಲೇಖಿಸದೆಯೇ ನಿತೀಶ್‌ ಮಾತನಾಡಿದರು. ಎಂದಿನ ತಮ್ಮ ಸೌಮ್ಯ ಶೈಲಿಯನ್ನು ಕೈಬಿಟ್ಟಿದ್ದ ಅವರ ಮಾತಿನಲ್ಲಿ ಕೋಪ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ADVERTISEMENT

ಉದ್ಯೋಗ ಹುಡುಕಿಕೊಂಡು ಜನರು ಬಿಹಾರದಿಂದ ಹೊರಗೆ ಹೋಗುವ ಸ್ಥಿತಿ ಇನ್ನು ಮುಂದೆ ಇರುವು ದಿಲ್ಲ. ಏಕೆಂದರೆ, ರಾಜ್ಯದಲ್ಲಿಯೇ ಉದ್ಯೋಗ ಅವಕಾಶಗಳನ್ನು ಸರ್ಕಾರವು ಸೃಷ್ಟಿಸಲಿದೆ ಎಂದು ನಿತೀಶ್‌ ಭರವಸೆ ಕೊಟ್ಟರು. ಆರ್‌ಜೆಡಿಗೆ 15 ವರ್ಷ ರಾಜ್ಯ ಆಳುವ ಅವಕಾಶ ದೊರೆತಿತ್ತು. ಆಗ, ಅವರು ಸೃಷ್ಟಿಸಿದ್ದು 95 ಸಾವಿರ ಉದ್ಯೋಗಗಳನ್ನು ಮಾತ್ರ ಎಂದು ನಿತೀಶ್‌ ಹೇಳಿದರು.

ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಅವರ ಭದ್ರಕೋಟೆ ಚಪ್ರಾದಲ್ಲಿ ನಿತೀಶ್‌ ಅವರು ಚುನಾವಣಾ ಪ್ರಚಾರ ನಡೆಸಿದ್ದರು. ಆಗ ಯುವಕರು ‘ಲಾಲು ಜಿಂದಾ
ಬಾದ್‌’ ಎಂದು ಘೋಷಣೆ ಕೂಗಿದ್ದು ನಿತೀಶ್‌ ಆಕ್ರೋಶಕ್ಕೆ ಕಾರಣವಾಗಿತ್ತು.

‘ಸಂಸತ್ತಿನಲ್ಲಿ ಕಾಂಗ್ರೆಸ್‌ನ ನೂರು ಸದಸ್ಯರೂ ಇಲ್ಲ’

ಫೋರ್ಬ್ಸ್‌ಗಂಜ್‌/ಸಹರ್ಸ : ಸಂಸತ್ತಿನ ಎರಡು ಸದನಗಳಲ್ಲಿ ಒಟ್ಟಾಗಿ ನೋಡಿದರೂ ಕಾಂಗ್ರೆಸ್‌ನ ಸದಸ್ಯರ ಸಂಖ್ಯೆ ನೂರರ ಒಳಗೆ ಕುಸಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆ ಪಕ್ಷವನ್ನು ಲೇವಡಿ ಮಾಡಿದ್ದಾರೆ. ಬಡತನ ನಿರ್ಮೂಲನೆ ಮತ್ತು ರೈತರ ಸಾಲಮನ್ನಾದಂತಹ ಹುಸಿ ಭರವಸೆಗಳಿಗಾಗಿ ಜನರು ಕಾಂಗ್ರೆಸ್‌ ಪಕ್ಷವನ್ನು ಶಿಕ್ಷಿಸಿದ್ದಾರೆ ಎಂದು ಅವರು ಹೇಳಿದರು.

ಆರ್‌ಜೆಡಿ–ಕಾಂಗ್ರೆಸ್‌ ಮೈತ್ರಿಕೂಟದ ವಿರುದ್ಧ ಅವರು ತೀವ್ರವಾದ ವಾಗ್ದಾಳಿ ನಡೆಸಿದರು. 15 ವರ್ಷಗಳ ಹಿಂದೆ ಆರ್‌ಜೆಡಿ ಅಧಿಕಾರದಲ್ಲಿ ಇದ್ದಾಗ ‘ಜಂಗಲ್‌ ರಾಜ್‌’ ಅಸ್ತಿತ್ವದಲ್ಲಿತ್ತು. ಮತಗಟ್ಟೆಗಳನ್ನೇ ವಶಕ್ಕೆ ಪಡೆಯುವ ಮೂಲಕ ಬಡಜನರ ಮತ ಹಾಕುವ ಹಕ್ಕನ್ನೇ ಕಸಿದುಕೊಳ್ಳಲಾಗಿತ್ತು ಎಂದು ಅವರು ಆರೋಪಿಸಿದರು.

‘ಅಸುರಕ್ಷತೆಯ ಕತ್ತಲೆ ಮತ್ತು ಅರಾಜಕತೆಯನ್ನು ನಿತೀಶ್‌ ಅವರು ಕೊನೆಗಾಣಿಸಿದ್ದಾರೆ’ ಎಂದು ಮೋದಿ ಪ್ರಶಂಸಿಸಿದರು.

ಜಂಗಲ್‌ ರಾಜ್‌ನ ಗೆಳೆಯರು, ಬಿಹಾರದ ಜನರು ‘ಭಾರತ ಮಾತಾ ಕೀ ಜೈ’ ಮತ್ತು ‘ಜೈ ಶ್ರೀರಾಂ’ ಎಂದು ಘೋಷಣೆ ಕೂಗುವುದರ ವಿರುದ್ಧ ಇದ್ದಾರೆ ಎಂದರು.

‘ನಿತೀಶ್‌, ಮೋದಿ ಆಯ್ಕೆಯೇ ತಪ್ಪು’

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಕತಿಹಾರ್‌ ಮತ್ತು ಕಿಶನ್‌ಗಂಜ್‌ನಲ್ಲಿ ಪ್ರಚಾರ ಮಾಡಿದ್ದಾರೆ. ಬಿಹಾರವು ಹಲವು ವರ್ಷಗಳಿಂದ ಪ್ರವಾಹ, ನಿರುದ್ಯೋಗ ಮತ್ತು ವಲಸೆ ಸಮಸ್ಯೆ ಎದುರಿಸುತ್ತಿದೆ ಎಂದು ತಮ್ಮ ಪ್ರಚಾರ ಭಾಷಣದಲ್ಲಿ ಅವರು ಹೇಳಿದ್ದಾರೆ.

ಬಿಹಾರ ಮತ್ತು ಛತ್ತೀಸಗಡ ರಾಜ್ಯಗಳನ್ನು ರಾಹುಲ್‌ ಅವರು ಹೋಲಿಸಿ ಮಾತನಾಡಿದ್ದಾರೆ. ‘ಛತ್ತೀಸಗಡದ ರೈತರು ಒಂದು ಕ್ವಿಂಟಲ್‌ ಭತ್ತಕ್ಕೆ ₹2,200 ಪಡೆಯುತ್ತಾರೆ. ಹಾಗಿದ್ದರೂ ಬಿಹಾರದ ರೈತರಿಗೆ ಕೇವಲ ₹700 ನೀಡುವುದು ಏಕೆ. ನೀವು ಮಾಡಿದ ತಪ್ಪು ಏನು? ನಿತೀಶ್‌ ಮತ್ತು ಮೋದಿಯವರನ್ನು ಆಯ್ಕೆ ಮಾಡಿದ್ದೇ ನೀವು ಮಾಡಿದ ತಪ್ಪು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.