ADVERTISEMENT

ಬಿಹಾರ: ಸಿವಿಲ್‌ ಸರ್ವೀಸ್‌ ಪ್ರಶ್ನೆ ಪತ್ರಿಕೆ ಸೋರಿಕೆ; ಪರೀಕ್ಷೆ ರದ್ದು

ಪಿಟಿಐ
Published 8 ಮೇ 2022, 16:32 IST
Last Updated 8 ಮೇ 2022, 16:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಾಟ್ನಾ: ಸಿವಿಲ್‌ ಸರ್ವೀಸಸ್‌ (ಪೂರ್ವಭಾವಿ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಬಿಹಾರ ಲೋಕಸೇವಾ ಆಯೋಗವು (ಬಿಪಿಎಸ್‌ಸಿ) ಭಾನುವಾರ ಪರೀಕ್ಷೆ ರದ್ದುಪಡಿಸಿದೆ.

ಮಧ್ಯಾಹ್ನ ಪರೀಕ್ಷೆ ಆರಂಭವಾಗುವುದಕ್ಕೆ ಕೆಲವೇ ನಿಮಿಷಗಳ ಮುನ್ನ ಪ್ರಶ್ನೆ ಪತ್ರಿಕೆಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. 'ಪರೀಕ್ಷೆಗಳನ್ನು ರದ್ದುಪಡಿಸಲಾಗಿದ್ದು, ಶೀಘ್ರದಲ್ಲೇ ಮುಂದಿನ ಪ್ರಕಟಣೆಗಳನ್ನು ಹೊರಡಿಸಲಾಗುತ್ತದೆ' ಎಂದು ಬಿಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಅಮರೇಂದರ್‌ ಕುಮಾರ್‌ ಹೇಳಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಸಂಬಂಧ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿ ರೂಪಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ಬಿಪಿಎಸ್‌ಸಿ ಕಾರ್ಯದರ್ಶಿ ಜಿವುತ್‌ ಸಿಂಗ್‌ ಹೇಳಿದ್ದಾರೆ.

ADVERTISEMENT

'ಪರೀಕ್ಷೆ ಆರಂಭವಾಗುವ ಸಮಯಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕುರಿತು ದೂರು ಬಂದವು. ಪ್ರಶ್ನೆ ಪತ್ರಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ಹೋಲಿಸಿ ನೋಡಿದಾಗ ಅವು ಸಿ ಸೆಟ್‌ಗೆ ತಾಳಿಯಾಗುತ್ತಿರುವುದು ತಿಳಿದು ಬಂದಿತು. ಪರೀಕ್ಷೆಗೆ ಆರು ನಿಮಿಷಗಳಿಗೆ ಮುನ್ನ ಸ್ಕ್ರೀನ್‌ಶಾಟ್‌ಗಳು ವೈರಲ್‌ ಆಗಿರುವ ಬಗ್ಗೆ ವರದಿಯಾಗಿದೆ. ತನಿಖೆ ನಡೆಸುವ ಸಮಿತಿಯು ಈ ಆರೋಪಗಳ ಬಗ್ಗೆ ಗಮನ ಹರಿಸಲಿದೆ' ಎಂದು ಸಿಂಗ್‌ ತಿಳಿಸಿದ್ದಾರೆ.

ಭೋಜಪುರ್ ಜಿಲ್ಲೆಯ ಆರಾದಲ್ಲಿನ ವೀರ್‌ ಕುಂವರ್‌ ಸಿಂಗ್‌ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳಿಂದ ಮೊದಲಿಗೆ ಆರೋಪಗಳು ಕೇಳಿಬಂದವು. 'ಕೆಲವು ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ಮಾಡಿಕೊಡಲಾಗಿದೆ ಹಾಗೂ ಮೊಬೈಲ್‌ ಫೋನ್‌ಗಳನ್ನೂ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ' ಎಂದು ಹಲವು ಅಭ್ಯರ್ಥಿಗಳು ಗಲಾಟೆ ಶುರು ಮಾಡಿದ್ದರು.

ಭೋಜಪುರ್‌ನ ಜಿಲ್ಲಾಧಿಕಾರಿ ರೌಶಾನ್‌ ಕುಷ್ವಾ ಸ್ಥಳಕ್ಕೆ ಧಾವಿಸಿ ಪ್ರತಿಭಟನಾ ನಿರತ ಅಭ್ಯರ್ಥಿಗಳನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಲಿಖಿತ ರೂಪದಲ್ಲಿ ದೂರು ನೀಡುವಂತೆ ಅಭ್ಯರ್ಥಿಗಳಿಗೆ ತಿಳಿಸಿರುವುದಾಗಿ ರೌಶಾನ್‌ ಹೇಳಿದ್ದಾರೆ.

ಬಿಹಾರದಾದ್ಯಂತ 1,000 ಕೇಂದ್ರಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸಿವಿಲ್‌ ಸರ್ವೀಸ್‌ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ತಿಳಿಯುತ್ತಿದ್ದಂತೆ ಅಭ್ಯರ್ಥಿಗಳು ದಿಗ್ಭ್ರಾಂತರಾಗಿದ್ದಾರೆ.

ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳು ಪಂಚಾಯಿತಿ ಚುನಾವಣೆಗಳ ಕಾರಣದಿಂದಾಗಿ ಮುಂದೂಡಲಾಗಿತ್ತು. ಈಗ ಪರೀಕ್ಷೆ ಮತ್ತೆ ಮುಂದೂಡಲ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.