ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭಾಗವಾಗಿ ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಆಗ್ರಹ, ಆಕ್ಷೇಪಣೆ ಮತ್ತು ತಿದ್ದುಪಡಿ ಅರ್ಜಿಗಳನ್ನು ಸಲ್ಲಿಸಲು ಸೆ.1ರ ಬಳಿಕವೂ ಅವಕಾಶವಿದೆ ಎಂದು ಚುನಾವಣಾ ಆಯೋಗ (ಇ.ಸಿ) ತಿಳಿಸಿದೆ.
ಆದರೆ ಈಗಾಗಲೇ ನಿಗದಿಪಡಿಸಿರುವ ಸೆ.1ರ ಗಡುವಿನ ಬಳಿಕ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಬಿಹಾರ ಎಸ್‌ಐಆರ್ ಕುರಿತು ಚುನಾವಣಾ ಆಯೋಗವು ಜೂನ್ 24ರಂದು ಹೊರಡಿಸಿದ್ದ ವೇಳಾಪಟ್ಟಿಯ ಪ್ರಕಾರ, ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸುವ ಗಡುವು ಸೋಮವಾರ (ಸೆ.1) ಕೊನೆಗೊಂಡಿದೆ. ಮತದಾರರ ಅಂತಿಮ ಪಟ್ಟಿಯನ್ನು ಸೆಪ್ಟೆಂಬರ್ 30 ರಂದು ಪ್ರಕಟಿಸಲಾಗುತ್ತದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ಹೇಳಿರುವುದನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಸೋಮವಾರ ಗಮನಿಸಿತು.
ಕರಡು ಮತದಾರರ ಪಟ್ಟಿ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ನೀಡಿದ್ದ ಗಡುವು ವಿಸ್ತರಿಸುವಂತೆ ಕೋರಿ ಆರ್‌ಜೆಡಿ ಮತ್ತು ಎಐಎಂಐಎಂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.
‘ಸೆಪ್ಟೆಂಬರ್ 1ರ ನಂತರ ಆಕ್ಷೇಪಣೆಗಳು ಅಥವಾ ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸುವುದನ್ನು ನಿರ್ಬಂಧಿಸುವುದಿಲ್ಲ ಎಂದು ಚುನಾವಣಾ ಆಯೋಗ ಸಲ್ಲಿಸಿದ ಟಿಪ್ಪಣಿ ಹೇಳುತ್ತದೆ. ತಿದ್ದುಪಡಿಗಳನ್ನು ಗಡುವಿನ (ಸೆ.1) ನಂತರವೂ ಸಲ್ಲಿಸಬಹುದು. ಆದ್ದರಿಂದ ಆಕ್ಷೇಪಣೆ ಸಲ್ಲಿಕೆ ಮುಂದುವರಿಯಲಿದೆ’ ಎಂಬುದನ್ನು ಪೀಠವು ಗಮನಿಸಿತು.
ಚುನಾವಣಾ ಆಯೋಗದ ಟಿಪ್ಪಣಿಗೆ ಪ್ರತಿಕ್ರಿಯೆ ಸಲ್ಲಿಸುವ ಸ್ವಾತಂತ್ರ್ಯವನ್ನು ಪೀಠವು ರಾಜಕೀಯ ಪಕ್ಷಗಳಿಗೆ ನೀಡಿತು.
ಇ.ಸಿ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ‘ಆಕ್ಷೇಪಣೆ ಸಲ್ಲಿಕೆಯ ಗಡುವು ವಿಸ್ತರಿಸಿದರೆ ಇಡೀ ಎಸ್‌ಐಆರ್ ಪ್ರಕ್ರಿಯೆ ಮತ್ತು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸುವುದಕ್ಕೆ ಅಡ್ಡಿಯಾಗಲಿದೆ’ ಎಂದು ವಾದಿಸಿದರು.
‘ನಿಯಮಗಳ ಪ್ರಕಾರವೇ ಕಾಲಮಿತಿ ನಿಗದಿಪಡಿಸಲಾಗಿದೆ. ಮತದಾರರಿಗೆ ಆಗ್ರಹ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಗರಿಷ್ಠ ಮೂವತ್ತು ದಿನಗಳ ಕಾಲಾವಕಾಶ ನೀಡಲಾಗಿದೆ’ ಎಂದರು.
ಎಸ್‌ಐಆರ್‌ಅನ್ನು ‘ಮುಂದುವರಿದುಕೊಂಡು ಹೋಗುವ ಪ್ರಕ್ರಿಯೆ’ ಎಂದು ಹೇಳಿರುವ ಅಯೋಗ, ಅಪೂರ್ಣ ದಾಖಲೆಗಳನ್ನು ನೀಡಿರುವ ಮತದಾರರಿಗೆ ಏಳು ದಿನಗಳಲ್ಲಿ ನೋಟಿಸ್ ಕಳುಹಿಸಲಾಗುವುದು ಎಂದಿದೆ. ರಾಜಕೀಯ ಪಕ್ಷಗಳು ಸಲ್ಲಿಸಿರುವ ಆಕ್ಷೇಪಣೆಗಳಲ್ಲಿ ಹೆಚ್ಚಿನವು ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದೆ.
ಕರಡು ಮತದಾರರ ಪಟ್ಟಿ ಬಗ್ಗೆ ಆಕ್ಷೇಪಣೆಗಳ ಸಲ್ಲಿಕೆಗೆ ಮತದಾರರು ಮತ್ತು ರಾಜಕೀಯ ಪಕ್ಷಗಳಿಗೆ ನೆರವಾಗಲು ಕಾನೂನಿನ ಪೂರಕ ಅಂಶಗಳಲ್ಲಿ ಪರಿಣತರಾಗಿರುವ ಸ್ವಯಂಸೇವಕರನ್ನು ನೇಮಿಸುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಪೀಠವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ನಿಗದಿಪಡಿಸಿತು.
ಬಿಹಾರದ 7.24 ಕೋಟಿ ಮತದಾರರಲ್ಲಿ ಶೇಕಡ 99.5 ಮತದಾರರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಗತ್ಯದ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
ಆರ್‌ಜೆಡಿ ಮತ್ತು ಸಿಪಿಐ-ಎಂಎಲ್ ಪಕ್ಷಗಳು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳು ನಿಗದಿತ ಸ್ವರೂಪಗಳಲ್ಲಿ ಆಗ್ರಹ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಮತದಾರರಿಗೆ ಸಹಾಯ ಮಾಡಿಲ್ಲ ಎಂದೂ ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.