ADVERTISEMENT

ಬಿಹಾರ SIR: 65 ಲಕ್ಷ ಮಂದಿಯ ವಿವರ ಪ್ರಕಟಿಸಿ; ಸುಪ್ರೀಂ ಕೋರ್ಟ್

ಬಿಹಾರ ಎಸ್‌ಐಆರ್‌: ಚುನಾವಣಾ ಆಯೋಗಕ್ಕೆ ‘ಸುಪ್ರೀಂ’ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 13:54 IST
Last Updated 14 ಆಗಸ್ಟ್ 2025, 13:54 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಪಟ್ಟಿಯಿಂದ ಕೈಬಿಟ್ಟಿರುವ 65 ಲಕ್ಷ ಮತದಾರರ ಹೆಸರು ಮತ್ತು ವಿವರಗಳನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

ಚುನಾವಣಾ ಆಯೋಗ ಬಿಹಾರದಲ್ಲಿ ನಡೆಸುತ್ತಿರುವ ಎಸ್ಐಆರ್‌ ಪ್ರಕ್ರಿಯೆ ವಿರುದ್ಧ ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಬಳಿಕ ಮತದಾರರ ಕರಡು ಪಟ್ಟಿಯನ್ನು ಆಗಸ್ಟ್‌ 1ರಂದು ಪ್ರಕಟಿಸಲಾಗಿದೆ. ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ, ಕರಡು ಪಟ್ಟಿಯಿಂದ 65 ಲಕ್ಷ ಮಂದಿಯನ್ನು ಕೈಬಿಡಲಾಗಿದೆ. ಆಯೋಗ ಕೈಬಿಟ್ಟಿರುವ ಅಷ್ಟೂ ಹೆಸರುಗಳನ್ನು, ಕೈಬಿಡಲು ಕಾರಣವಾಗಿರುವ ಅಂಶಗಳ ಸಮೇತ ಪ್ರಕಟಿಸುವಂತೆ ಪೀಠವು ಹೇಳಿದೆ.

ADVERTISEMENT

ಮೃತಪಟ್ಟವರು, ಶಾಶ್ವತವಾಗಿ ವಲಸೆ ಹೋದವರು ಅಥವಾ ಬೇರೆ ಕ್ಷೇತ್ರಗಳಿಗೆ ವಾಸ ಬದಲಿಸಿದವರ ಹೆಸರುಗಳನ್ನು ಒಳಗೊಂಡಿರುವ ಪಟ್ಟಿಯನ್ನು ಪಂಚಾಯತ್ ಮಟ್ಟದ ಕಚೇರಿ ಮತ್ತು ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಿದೆ.

ಕೈಬಿಟ್ಟಿರುವ 65 ಲಕ್ಷ ಮತದಾರರ ಪಟ್ಟಿ ಎಲ್ಲಿ ಲಭ್ಯವಿರಲಿದೆ ಎಂಬುದನ್ನು ಜನರಿಗೆ ತಿಳಿಸಲು ಸುದ್ದಿ ವಾಹಿನಿಗಳು, ರೇಡಿಯೊ ಮತ್ತು ಪತ್ರಿಕೆಗಳ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು ಎಂಬುದನ್ನು ಪೀಠವು ಒತ್ತಿಹೇಳಿದೆ. 

ಕರಡು ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವುದರಿಂದ ಸಮಸ್ಯೆ ಎದುರಿಸುತ್ತಿರುವವರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಮುಂದಿನ ವಿಚಾರಣೆಯನ್ನು ಆಗಸ್ಟ್ 22ಕ್ಕೆ ನಿಗದಿಪಡಿಸಿದ ಪೀಠ, ತನ್ನ ನಿರ್ದೇಶನದ ಪಾಲನೆಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಿದೆ.

ಆಗಸ್ಟ್‌ 1ರಂದು ಕರಡು ಪಟ್ಟಿ ಪ್ರಕಟಿಸುವ ಸಂದರ್ಭ ಚುನಾವಣಾ ಆಯೋಗವು, ‘36.28 ಲಕ್ಷ ಮಂದಿ ಶಾಶ್ವತವಾಗಿ ವಲಸೆ ಹೋಗಿದ್ದಾರೆ. 22.34 ಲಕ್ಷ ಮಂದಿ ಮೃತಪಟ್ಟಿದ್ದಾರೆ ಮತ್ತು 7.01 ಲಕ್ಷ ಜನರು ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿತ್ತು. ಅವರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ ಎಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.