ADVERTISEMENT

ಬಿಹಾರದ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹1,000 ನೆರವು: ಸಿಎಂ ನಿತೀಶ್ ಘೋಷಣೆ

ಪಿಟಿಐ
Published 18 ಸೆಪ್ಟೆಂಬರ್ 2025, 5:23 IST
Last Updated 18 ಸೆಪ್ಟೆಂಬರ್ 2025, 5:23 IST
ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ 
ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ    

ಪಟ್ನಾ: ಬಿಹಾರ ಸರ್ಕಾರ ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯತಾ ಭತ್ತಾ ಯೋಜನೆ (Mukhyamantri Nishchay Swayam Sahayta Bhatta Yojana) ಅಡಿಯಲ್ಲಿ ಪದವೀಧರ ನಿರುದ್ಯೋಗಿ ಯುವಕರಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಪ್ರತಿ ತಿಂಗಳು ₹1,000 ಆರ್ಥಿಕ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಘೋಷಣೆ ಮಾಡಿದ್ದಾರೆ.

ಈ ಹಿಂದೆ, ಈ ಯೋಜನೆಯು ಮಧ್ಯಂತರ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಮಾತ್ರ ಅನ್ವಯಿಸುತ್ತಿತ್ತು. ಆದರೆ ಈಗ ಈ ಯೋಜನೆಯನ್ನು ಇತರೆ ಪದವೀಧರ ನಿರುದ್ಯೋಗಿ ಯುವಕರಿಗೂ ವಿಸ್ತರಿಸಲಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, "ರಾಜ್ಯ ಸರ್ಕಾರದ 7 ಪರಿಹಾರ ಕಾರ್ಯಕ್ರಮಗಳ ಅಡಿಯಲ್ಲಿ, ಈ ಹಿಂದೆ ನೀಡುತ್ತಿದ್ದ ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯತಾ ಭತ್ತಾ ಯೋಜನೆಯನ್ನು ಈಗ ವಿಸ್ತರಿಸಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಇದರ ಅಡಿಯಲ್ಲಿ, ಈ ಹಿಂದೆ ಮಧ್ಯಂತರದಲ್ಲಿ ಪಾಸಾದ ಯುವಕರಿಗೆ ನೀಡಲಾಗುತ್ತಿದ್ದ ಸ್ವ-ಸಹಾಯ ಭತ್ಯೆ ಯೋಜನೆಯ ಪ್ರಯೋಜನವನ್ನು ಈಗ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಉತ್ತೀರ್ಣರಾದ ನಿರುದ್ಯೋಗಿ ಪದವೀಧರ ಯುವಕರಿಗೂ ವಿಸ್ತರಿಸಲಾಗಿದೆ" ಎಂದು ತಿಳಿಸಿದ್ದಾರೆ.

ADVERTISEMENT

"ಪದವಿ ಪಡೆದ ಬಳಿಕ ಎಲ್ಲಿಯೂ ಯಾವುದೇ ಅಧ್ಯಯನ ಮುಂದುವರೆಸದ, ಉದ್ಯೋಗ ಹುಡುಕುತ್ತಿರುವ, ಯಾವುದೇ ಸ್ವ ಉದ್ಯೋಗ ಹೊಂದಿಲ್ಲದ, ಸರ್ಕಾರಿ, ಖಾಸಗಿ ಅಥವಾ ಸರ್ಕಾರೇತರ ಉದ್ಯೋಗವನ್ನು ಪಡೆದಿರದ 20 ರಿಂದ 25 ವರ್ಷ ವಯಸ್ಸಿನ ಪದವಿ ಪಡೆದ ಯುವಕರಿಗೆ ಮುಖ್ಯಮಂತ್ರಿಗಳ ಪರಿಹಾರಗಳ ಸ್ವ-ಸಹಾಯ ಭತ್ಯೆಯನ್ನು ತಿಂಗಳಿಗೆ ₹1,000 ದರದಲ್ಲಿ ಗರಿಷ್ಠ ಎರಡು ವರ್ಷಗಳವರೆಗೆ ನೀಡಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.

ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ನಿತೀಶ್ ಕುಮಾರ್ ಈ ಘೋಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.