ಪಟ್ನಾ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಬಿಹಾರದ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆದು, ವಿರೋಧ ಪಕ್ಷದ ನಾಯಕ, ಆರ್‌ಜೆಡಿಯ ತೇಜಸ್ವಿ ಯಾದವ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ತೀವ್ರ ವಾಗ್ವಾದ ನಡೆಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಈ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆಯೂ ವಾಗ್ವಾದ ಮುಂದುವರಿಯಿತು. ಮಂಗಳವಾರದ ಕಲಾಪದ ವೇಳೆಯೂ ಈ ವಿಚಾರವಾಗಿ ಗದ್ದಲ ನಡೆದು, ಕೆಲ ದುರುದೃಷ್ಟಕರ ಘಟನೆಗಳು ನಡೆದಿದ್ದವು. ಆಗ ಸದನದ ಕೆಲ ಸಿಬ್ಬಂದಿ ಗಾಯಗೊಂಡಿದ್ದರು. ಅದು ಬುಧವಾರ ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು ಎಂದು ಸ್ಪೀಕರ್ ನಂದ ಕಿಶೋರ್ ಯಾದವ್ ಆರಂಭದಲ್ಲಿ ಹೇಳಿದರು.
ಇದರ ನಡುವೆಯೂ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಅಸಂಸದೀಯ ಪದಗಳು ವಿಲೇವಾರಿಯಾದವು. ಕೊನೆಗೆ ಸ್ಪೀಕರ್ ನಂದ ಕಿಶೋರ್ ಯಾದವ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
‘ಎಸ್‌ಐಆರ್ ಅನ್ನು ನಾವು ವಿರೋಧಿಸುವುದಿಲ್ಲ. ಆದರೆ ಚುನಾವಣೆ ಸಮೀಪಿಸುತ್ತಿರುವಾಗ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ಏಕೆ ನಡೆಸುತ್ತಿದೆ ಎಂಬುದು ಪ್ರಮುಖ ಆಕ್ಷೇಪವಾಗಿದೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ತಿಳಿಸಿದರು.
‘ಆಯೋಗ ಕೇಳುತ್ತಿರುವ ದಾಖಲೆಗಳು ಕೇವಲ ಶೇ 3ರಷ್ಟು ಮತದಾರರ ಬಳಿ ಇರಬಹುದು. ನಕಲಿ ಮತದಾರರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆ ಸ್ಥಾನದಲ್ಲಿದ್ದಾರೆಯೇ? ಅದನ್ನು ಹೇಳುವುದೇ ಚುನಾವಣಾ ಆಯೋಗದ ಉದ್ದೇಶವೇ?’ ಎಂದು ಅವರು ಪ್ರಶ್ನಿಸಿದರು.
‘ರಾಜ್ಯದ ಸುಮಾರು 4.5 ಕೋಟಿ ನಿವಾಸಿಗಳು ಹೊರ ರಾಜ್ಯಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರು ಚುನಾವಣೆ ವೇಳೆ ರಾಜ್ಯಕ್ಕೆ ಮರಳುತ್ತಾರೆ. ಈ ಮತದಾರರ ಭವಿಷ್ಯ ಏನಾಗಬಹುದು’ ಎಂದು ಅವರು ಕೇಳಿದರು.
ಆಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ನೀವಿನ್ನೂ ಚಿಕ್ಕವರಿದ್ದೀರಿ, ಇವುಗಳ ಬಗ್ಗೆ ನಿಮಗೆ ಅಷ್ಟಾಗಿ ಗೊತ್ತಿಲ್ಲ. ನೀವು ಏನೆಲ್ಲ ಕೆಟ್ಟದು ಹೇಳಬೇಕು ಎಂದುಕೊಂಡಿದ್ದೀರೊ ಅದನ್ನೆಲ್ಲ ಚುನಾವಣೆಯಲ್ಲಿ ಮಾಡಿ’ ಎಂದರು.
‘ನಿಮ್ಮ ಪೋಷಕರು ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ರಾಜ್ಯದ ಮಹಿಳೆಯರಿಗಾಗಲಿ, ಮುಸ್ಲಿಮರಿಗಾಗಲಿ ಅಥವಾ ಸಮಾಜದ ಇತರರಿಗಾಗಲಿ ಏನನ್ನೂ ಮಾಡಲಿಲ್ಲ. ಅವರ ಅವಧಿಯಲ್ಲಿ ಯಾರಿಗಾದರೂ ಅನುಕೂಲವಾಗಿದೆ ಎಂದರೆ, ಅದು ನಿಮ್ಮ ತಾಯಿಗೆ ಮಾತ್ರ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.