ನವದೆಹಲಿ: ‘ಭಾರತ ರತ್ನ’ ಪುರಸ್ಕಾರಕ್ಕೆ (ಮರಣೋತ್ತರ) ಭಾಜನರಾದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಜೀವನಕ್ಕೆ ಸಂಬಂಧಿಸಿದ ಪುಸ್ತಕವು ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ತಿಳಿಸಿದೆ.
ಸಂತೋಷ್ ಸಿಂಗ್ ಮತ್ತು ಆದಿತ್ಯ ಅನ್ಮೋಲ್ ಬರೆದಿರುವ ‘ದ ಜನನಾಯಕ ಕರ್ಪೂರಿ ಠಾಕೂರ್: ವಾಯ್ಸ್ ಆಫ್ ದಿ ವಾಯ್ಸ್‌ಲೆಸ್’ ಪುಸ್ತಕವು ಅವರ ರಾಜಕೀಯ ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಅಲ್ಲದೆ, ಒಳಮೀಸಲಾತಿ ಕುರಿತ ಅವರ ಪರಿಕಲ್ಪನೆಯ ಅಂಶವನ್ನೂ ಈ ಪುಸ್ತಕ ಒಳಗೊಂಡಿದೆ.
ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳು ಮತ್ತು ಮಹಿಳಾ ಮೀಸಲಾತಿ– ಇವುಗಳನ್ನು ವಿಭಜಿಸಿ, ಜಾರಿಗೆ ತರುವುದರಲ್ಕಿ ಕರ್ಪೂರಿ ಬಹುಮುಖ್ಯವಾದ ಪಾತ್ರ ವಹಿಸಿದ್ದರು. ಈ ವಿಚಾರಗಳು ಮಂಡಲ್ ಆಯೋಗದ ಶಿಫಾರಸುಗಳ ಮೇಲೆ ಗಣನೀಯ ಪ್ರಭಾವ ಬೀರಿದ್ದವು.
‘ಸಾಮಾಜಿಕ ದಂತಕಥೆಯಾದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಕುರಿತು ನಾವು ಬರೆದ ಪುಸ್ತಕವನ್ನು ಬಿಡುಗಡೆ ಮಾಡಲು ಪೆಂಗ್ವಿನ್ ಒಪ್ಪಿರುವುದು ಬಹಳ ಖುಷಿ ನೀಡಿದೆ. ಜೊತೆಗೆ ಠಾಕೂರ್ ಅವರಿಗೆ ‘ಭಾರತ ರತ್ನ’ ಘೋಷಿಸಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ. ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಗಾಗಿ ಹೋರಾಡಿದ ಮೊದಲಿಗರಷ್ಟೇ ಅಲ್ಲದೆ, ಎಲ್ಲರನ್ನೂ ಒಳಗೊಂಡ ಸಂಘಟನಾತ್ಮಕ ರಾಜಕೀಯಕ್ಕೂ ಒತ್ತು ನೀಡಿದ್ದರು’ ಎಂದು ಸಂತೋಷ್ ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.