ADVERTISEMENT

ಬಿರ್‌ಭೂಮ್‌ ಸಜೀವ ದಹನ ಪ್ರಕರಣ: ಸಿಬಿಐಗೆ ವರ್ಗಾಯಿಸಿದ ಕಲ್ಕತ್ತ ಹೈಕೋರ್ಟ್

ಪಿಟಿಐ
Published 25 ಮಾರ್ಚ್ 2022, 6:43 IST
Last Updated 25 ಮಾರ್ಚ್ 2022, 6:43 IST
ಅವಘಡದ ನಂತರ ಕಂಡುಬಂದ ದೃಶ್ಯ (ಚಿತ್ರ-ಐಎಎನ್ಎಸ್)
ಅವಘಡದ ನಂತರ ಕಂಡುಬಂದ ದೃಶ್ಯ (ಚಿತ್ರ-ಐಎಎನ್ಎಸ್)   

ಕೋಲ್ಕತ್ತ: ರಾಮ್‌ಪುರಹಾಟ್‌ ಜಿಲ್ಲೆಯ ಬೋಗ್‌ತುಇ ಗ್ರಾಮದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿ ಎಂಟು ಜನರನ್ನು ಸಜೀವವಾಗಿ ಸುಡಲಾಗಿದ್ದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕಲ್ಕತ್ತ ಹೈಕೋರ್ಟ್ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಬಂಧಿತರನ್ನು ಸಿಬಿಐ ವಶಕ್ಕೆ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರ ರಚಿಸಿರುವ ಎಸ್‌ಐಟಿಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಆರ್. ಭಾರದ್ವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಏ.7ರೊಳಗೆ ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ವರದಿ ಸಲ್ಲಿಸುವಂತೆ ಸಿಬಿಐಗೆ ಕೇಳಿದೆ.

ADVERTISEMENT

ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸದಂತೆ ಮಾಡಿದ ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ನ್ಯಾಯದ ದೃಷ್ಠಿಕೋನದಲ್ಲಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದೆ.

ಸುಮೊಟೊ ಅರ್ಜಿಯೊಂದಿಗೆ ಪ್ರಕರಣವನ್ನು ಸಿಬಿಐ ಅಥವಾ ಎನ್‌ಐಎಗೆ ವರ್ಗಾಯಿಸಬೇಕು ಎಂದು ಕೋರಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ರಾಮ್‌ಪುರಹಾಟ್‌ನ ಪಂಚಾಯಿತಿಯ ಟಿಎಂಸಿ ಸದಸ್ಯನ ಹತ್ಯೆಯ ನಂತರ ಬೋಗ್‌ತುಇ ಗ್ರಾಮದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಕೃತ್ಯದಲ್ಲಿ ಇಬ್ಬರು ಮಕ್ಕಳು, ಐವರು ಮಹಿಳೆಯರು ಸೇರಿ ಎಂಟು ಜನರನ್ನು ಸಜೀವವಾಗಿ ಸುಡಲಾಗಿತ್ತು. ಮೃತರ ಶವಪರೀಕ್ಷೆಗಳನ್ನು ಬುಧವಾರ ನಡೆಸಲಾಗಿತ್ತು.

ಸಂತ್ರಸ್ತರನ್ನು ಸಜೀವವಾಗಿ ದಹಿಸುವ ಮುನ್ನ, ಅವರ ಮೇಲೆ ತೀವ್ರ ಹಲ್ಲೆ ನಡೆಸಲಾಗಿತ್ತು ಎಂದು ಶವಪರೀಕ್ಷೆಯಲ್ಲಿ ಪತ್ತೆಯಾಗಿದೆ’ ಎಂದು ರಾಮ್‌ಪುರಹಾಟ್‌ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.