ADVERTISEMENT

ಬಾಲ್ಯದ ಗೆಳತಿಯನ್ನೇ ಜೀವಂತವಾಗಿ ಸುಟ್ಟು ಹಾಕಿದ ಲಿಂಗ ಪರಿವರ್ತಿತ ವ್ಯಕ್ತಿ!

ಮದುವೆ ಮಾಡಿಕೊಳ್ಳಲು ನಿರಾಕರಿಸಬಹುದು ಎಂಬ ಶಂಕೆಯಿಂದ ಹತ್ಯೆ

ಪಿಟಿಐ
Published 25 ಡಿಸೆಂಬರ್ 2023, 10:39 IST
Last Updated 25 ಡಿಸೆಂಬರ್ 2023, 10:39 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚೆನ್ನೈ: ಲಿಂಗ ಪರಿವರ್ತಿತ ವ್ಯಕ್ತಿ ತನ್ನ ಬಾಲ್ಯ ಸ್ನೇಹಿತೆಯ ಕಣ್ಣಿಗೆ ಬಟ್ಟೆ ಕಟ್ಟಿ, ಕಾಲುಗಳಿಗೆ ಸರಪಳಿ ಬಿಗಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟುಹಾಕಿರುವ ಘಟನೆ ಚೆನ್ನೈನ ದಕ್ಷಿಣ ಉಪನಗರ ಕೆಳಂಬಕ್ಕಂನ ತಳಂಬೂರ್‌ನಲ್ಲಿ ನಡೆದಿದೆ.

ಆರೋಪಿ, 27 ವರ್ಷದ ಲಿಂಗ ಪರಿವರ್ತಿತ ವ್ಯಕ್ತಿಯನ್ನು (ವೆಟ್ರಿಮಾರನ್) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ವೆಟ್ರಿಮಾರನ್ (ಬಾಲ್ಯದ ಹೆಸರು ಪಾಂಡಿ ಮಹೇಶ್ವರಿ) ತನ್ನ ಬಾಲ್ಯದ ಗೆಳತಿ ಆರ್. ನಂದಿನಿಯನ್ನು ಮದುವೆಯಾಗುವ ಇಚ್ಛೆಯಿಂದ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ
ಒಳಗಾಗಿದ್ದ. ಆದರೆ, ನಂದಿನಿಗೆ ಬೇರೆಯವರಲ್ಲಿ ಆಸಕ್ತಿ ಇರಬಹುದೆಂಬ ಶಂಕೆ ಮೂಡಿ, ಶನಿವಾರ ರಾತ್ರಿ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿ ತನ್ನ 27ನೇ ಹುಟ್ಟುಹಬ್ಬದ ಮುನ್ನಾದಿನದಂದು ನಂದಿನಿಗೆ ಅಚ್ಚರಿ ನೀಡುವುದಾಗಿ ನಂಬಿಸಿ ಕರೆಸಿಕೊಂಡಿದ್ದ. ಶನಿವಾರ ಸಂಜೆ ಇಬ್ಬರೂ ಒಟ್ಟಿಗೆ ಹೊರಗಡೆ ಸುತ್ತಾಡಿ, ಅನಾಥಾಶ್ರಮ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆರೋಪಿ ಜತೆ ಹಲವು ಗಂಟೆಗಳ ಕಾಲ ಕಳೆದಿದ್ದ ನಂದಿನಿಗೆ ಸಂಚಿನ ಬಗ್ಗೆ ಯಾವುದೇ ಅನುಮಾನ ಬಂದಿಲ್ಲ. ಅಚ್ಚರಿ ಏನಿರಬಹುದೆಂದು ನೋಡುವ ಕುತೂಹಲದಲ್ಲಿ ನಂದಿನಿ, ಆರೋಪಿಯು ಕರೆದ ಜಾಗಕ್ಕೆ ಹೋಗಿದ್ದಾಳೆ. ಮೈದಾನ
ವೊಂದರಲ್ಲಿ ಆರೋಪಿಯು, ನಂದಿನಿಯ ಕಣ್ಣಿಗೆ ಬಟ್ಟೆ ಕಟ್ಟಿ, ಬೀಗವಿದ್ದ ಸರಪಳಿಯಿಂದ ಆಕೆಯ ಎರಡೂ ಕಾಲುಗಳನ್ನು ಬಿಗಿದು, ಎರಡು ಕೈಗಳ ಮಣಿಕಟ್ಟನ್ನು ಬ್ಲೇಡ್‌ನಿಂದ ಸೀಳಿದ್ದಾನೆ. ನಂತರ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿದ್ದಾನೆ’ ಎಂದು ಪ್ರಕರಣದ ತನಿಖಾ ತಂಡದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಂದಿನಿ ಜತೆಗೆ ಪೊಸೆಸಿವ್‌ನೆಸ್‌ ಬೆಳೆಸಿಕೊಂಡಿದ್ದ ಆರೋಪಿಗೆ ಆಕೆ ಬೇರೆ ಪುರುಷ ಸಹೋದ್ಯೋಗಿಗಳೊಂದಿಗೆ ಮಾತನಾಡುವುದು ಇಷ್ಟವಾಗುತ್ತಿರಲಿಲ್ಲ. ಅವರೆಲ್ಲರೂ ಸ್ನೇಹಿತರೆಂದು ಆಕೆ ಹೇಳಿದರೂ ನಂಬದೆ, ತನ್ನ ಜನ್ಮದಿನದ ಮುನ್ನಾ ದಿನವೇ ಕೊಲ್ಲಲು ಯೋಜಿಸಿ ವಾರದ ಹಿಂದೆಯೇ ಕೊಲೆಗೆ
ಬೇಕಾದವುಗಳೆಲ್ಲವನ್ನೂ ಮೈದಾನದಲ್ಲಿ ತಂದಿಟ್ಟಿದ್ದ’ ಎಂದು ಅವರು
ಹೇಳಿದ್ದಾರೆ.

‘ಆರೋಪಿ ಬೆಂಕಿ ಹಚ್ಚಿ ಪರಾರಿಯಾದ ನಂತರ ಆಕೆಯ ಕಿರುಚಾಟ ಕೇಳಿಸಿ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂದಿನಿ ಆರೋಪಿಯ ಹೆಸರನ್ನು ನರಳುತ್ತಲೇ ಹೇಳಿದ್ದು, ಅವನ ಮೊಬೈಲ್‌ ನಂಬರ್‌ ಕೂಡ ಕೊಟ್ಟಿದ್ದಾಳೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತ
ಪಟ್ಟಿದ್ದಾಳೆ. ಆರೋಪಿಯನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

‘ಬಾಲ್ಯ ಸ್ನೇಹಿತರು; ಸಹ ಜೀವನದಲ್ಲಿರಲಿಲ್ಲ’

‘ನಂದಿನಿ ಮತ್ತು ವೆಟ್ರಿ ಬಾಲ್ಯದ ಸ್ನೇಹಿತರಾಗಿದ್ದರು. ಮಧುರೈನಲ್ಲಿ ಒಂದನೇ ತರಗತಿಯಿಂದ ಒಟ್ಟಿಗೆ ಓದಿದ್ದರು. ವೆಟ್ರಿ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಅವರ ಕುಟುಂಬವು ಒಪ್ಪದ ಕಾರಣ, ವೆಟ್ರಿ ಓದು ಮುಂದುವರಿಸಲು ಮಧುರೈ ತೊರೆದರೆ, ನಂದಿನಿ ಮಧುರೈನಲ್ಲಿ ಪದವಿ ಪಡೆದು, ಉದ್ಯೋಗಕ್ಕಾಗಿ ಚೆನ್ನೈಗೆ ಸ್ಥಳಾಂತರವಾಗಿದ್ದರು. ವೆಟ್ರಿ ಕೂಡ ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರವಾಗಿ, ನಂತರ ಇಬ್ಬರೂ ಒಟ್ಟಿಗೆ ಸುತ್ತಾಡಲು ಪ್ರಾರಂಭಿಸಿದ್ದರು. ನಂದಿನಿ ತನ್ನ ಸಂಬಂಧಿಯೊಂದಿಗೆ ಕನ್ನಗಿ ನಗರದಲ್ಲಿ ನೆಲೆಸಿದ್ದರೆ, ವೆಟ್ರಿ ತಾಂಬರಂನಲ್ಲಿ ವಾಸವಿದ್ದು, ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‌‘ನಂದಿನಿಗೆ ತನ್ನ ಬಗ್ಗೆ ವೆಟ್ರಿಮಾರನ್‌ ಬೆಳೆಸಿಕೊಂಡಿರುವ ಭಾವನೆಗಳ ಬಗ್ಗೆ ತಿಳಿದಿರಲಿಲ್ಲ. ಅವನನ್ನು ಸ್ನೇಹಿತನಾಗಿ ಮಾತ್ರ ನೋಡಿದ್ದಳು. ಇಬ್ಬರೂ ಸಹಜೀವನದಲ್ಲಿ ಇರಲಿಲ್ಲ’ ಎಂದು ತನಿಖಾ ತಂಡದಲ್ಲಿರುವ ಮತ್ತೊಬ್ಬ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. 

‘ಅವರು ಒಳ್ಳೆಯ ಸ್ನೇಹಿತರು ಎಂದು ನಮಗೆ ತಿಳಿದಿತ್ತು. ವೆಟ್ರಿಮಾರನ್ ಮನೆಯವರು ಅವನನ್ನು ನಿರಾಕರಿಸಿದರೂ ನಂದಿನಿ ಸಹಾನುಭೂತಿ ತೋರಿಸಿ ತಪ್ಪು ಮಾಡಿದಳು ಎನಿಸುತ್ತದೆ. ಅವನು ನಂದಿನಿಗೆ ಈ ರೀತಿ ಮಾಡುತ್ತಾನೆಂದು ನಾವು ಎಂದಿಗೂ ಭಾವಿಸಿರಲಿಲ್ಲ’ ಎಂದು ಸಂತ್ರಸ್ತೆಯ ಸಹೋದರಿ ಅಮುದಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.