ADVERTISEMENT

ಬಿಜೆಡಿಯ ಕಾದುನೋಡುವ ತಂತ್ರ

ಎಸ್‌.ಟಿ.ಬೆವೂರಿಯಾ
Published 22 ಮೇ 2019, 20:03 IST
Last Updated 22 ಮೇ 2019, 20:03 IST

ಭುವನೇಶ್ವರ: ಕೇಂದ್ರದಲ್ಲಿ ಸರ್ಕಾರ ರಚನೆ ಸಂಬಂಧಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರವೇ ನಿರ್ಧಾರ ತೆಗೆದುಕೊಳ್ಳಲು ಬಿಜೆಡಿ ನಿರ್ಧರಿಸಿದೆ. ಪಕ್ಷವು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

‘ಕೇಂದ್ರದಲ್ಲಿ ನಾವು ಸರ್ಕಾರ ರಚಿಸುವುದಿಲ್ಲ. ನಾವು ಎನ್‌ಡಿಎ ಜತೆಗಾಗಲೀ, ಯುಪಿಎ ಜತೆಗಾಗಲೀ ಇಲ್ಲ. ನಮ್ಮ ನೆರವು ಬೇಕಿದ್ದರೆ, ಅವರೇ ನಮ್ಮ ಬಳಿ ಬರಬೇಕು. ನಾವು ಯಾರ ಬಳಿಯೂ ಹೋಗುವ ಅವ್ಯಕತೆ ಇಲ್ಲ. ಯಾರಾದರೂ ನೆರವು ಕೇಳಿದರೆ, ಸೂಕ್ತ ಸಂದರ್ಭದಲ್ಲಿ ಪಕ್ಷವು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಬಿಜೆಡಿ ವಕ್ತಾರ ಪ್ರತಾಪ್ ದೇವ್ ಹೇಳಿದ್ದಾರೆ.

ಆದರೆ ಪಕ್ಷದ ಕೆಲವು ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕಾಂಗ್ರೆಸ್‌ ನೇತೃತ್ವದ ಯಾವುದೇ ಮೈತ್ರಿಕೂಟದ ಜತೆ ನಾವು ಹೋಗುವುದಿಲ್ಲ. ಬಿಜೆಡಿ ಅಸ್ತಿತ್ವಕ್ಕೆ ಬಂದದ್ದೇ ಕಾಂಗ್ರೆಸ್ ಅನ್ನು ವಿರೋಧಿಸಿ. ಹೀಗಿದ್ದಾಗ ನಾವು ಕಾಂಗ್ರೆಸ್‌ ಜತೆ ಹೋದರೆ ನಮ್ಮ ಮತಬ್ಯಾಂಕ್‌ಗೆ ಹೊಡೆತ ಬೀಳಲಿದೆ. ಆದರೆ ಏನು ಮಾಡಬೇಕು ಎಂದು ನಮ್ಮ ಪಕ್ಷದ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ಬಿಜೆಡಿಯ ಮತ್ತೊಬ್ಬ ನಾಯಕ ಹೇಳಿದ್ದಾರೆ.

ADVERTISEMENT

ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಎನ್‌ಡಿಎ ಅಥವಾ ಯುಪಿಎ ಮೈತ್ರಿಕೂಟದ ಜತೆ ಗುರುತಿಸಿಕೊಂಡಿಲ್ಲ. ಎರಡೂ ಮೈತ್ರಿಕೂಟಗಳಿಂದ ಸಮಾನ ಅಂತರ ಕಾಯ್ದುಕೊಂಡಿದೆ. ಚುನಾವಣೆಗೂ ಮುನ್ನ ಹಲವು ಭಿನ್ನಾಭಿಪ್ರಾಯಗಳ ಕಾರಣದಿಂದ ಬಿಜೆಪಿ ವಿರುದ್ಧ ಬಿಜೆಡಿ ಅಸಮಾಧಾನಗೊಂಡಿತ್ತು. ಒಡಿಶಾದಲ್ಲೂ ಬಿಜೆಪಿಯು ಬಿಜೆಡಿ ವಿರುದ್ಧವೇ ಕಣಕ್ಕೆ ಇಳಿದಿತ್ತು. ಆದರೆ ಫೋನಿ ಚಂಡಮಾರುತದ ನಂತರ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರರನ್ನು ಹೊಗಳಿಕೊಂಡಿದ್ದಾರೆ. ಹೀಗಾಗಿ ಬಿಜೆಡಿಯು ಎನ್‌ಡಿಎ ಸೇರಬಹುದು ಎಂಬ ವದಂತಿಯೂ ಚಾಲ್ತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.