ADVERTISEMENT

ರಾಜ್ಯಸಭೆ: ಕೊರೊನಾ ನಿಯಂತ್ರಣ; ಆಪ್‌–ಬಿಜೆಪಿ ಸದಸ್ಯರ ವಾಗ್ವಾದ

ಬಿರುಸಿನ ಚರ್ಚೆ: ಗಂಟೆ, ಚಪ್ಪಾಳೆ ಬಾರಿಸುವುದು ಮೂರ್ಖತನದ್ದು: ಸರ್ಕಾರದ ವಿರುದ್ಧ ಟೀಕೆ

ಪಿಟಿಐ
Published 17 ಸೆಪ್ಟೆಂಬರ್ 2020, 8:07 IST
Last Updated 17 ಸೆಪ್ಟೆಂಬರ್ 2020, 8:07 IST
ರಾಜ್ಯಸಭೆಯಲ್ಲಿ ಕಲಾಪ
ರಾಜ್ಯಸಭೆಯಲ್ಲಿ ಕಲಾಪ   

ನವದೆಹಲಿ: ಕೋವಿಡ್‌–19 ನಿಯಂತ್ರಿಸುವ ಕುರಿತು ಆಮ್‌ ಆದ್ಮಿ ಪಕ್ಷ ಮತ್ತು ಬಿಜೆಪಿ ಸದಸ್ಯರ ನಡುವೆ ಗುರುವಾರ ರಾಜ್ಯಸಭೆಯಲ್ಲಿ ವಾಗ್ವಾದವೇ ನಡೆಯಿತು.

‘ಕೊರೊನಾ ಯೋಧರನ್ನು ಗೌರವಿಸಲು ಚಪ್ಪಾಳೆ ತಟ್ಟಬೇಕು ಹಾಗೂ ಗಂಟೆ-ತಮಟೆ, ಪಾತ್ರೆಗಳನ್ನು ಬಾರಿಸಬೇಕು ಎಂದು ಪ್ರಧಾನಿ ನೀಡಿದ್ದ ಕರೆ ಮೂರ್ಖತನದ್ದು’ ಎಂದು ಆಪ್‌ ಸದಸ್ಯರು ಟೀಕಿಸಿದರು.

‘ಜಗತ್ತಿನಲ್ಲೇ ಚಪ್ಪಾಳೆ, ಗಂಟೆ ಬಾರಿಸುವುದರಿಂದ ಕೊರೊನಾ ವೈರಸ್‌ ತಡೆದಿರುವ ಒಂದಾದರೂ ಪ್ರಕರಣದ ಉದಾಹರಣೆ ನೀಡಿ. ಅಂತಹ ಪ್ರಕರಣವನ್ನು ತೋರಿಸಿದರೆ ವಿರೋಧ ಪಕ್ಷದ ಎಲ್ಲ ಸದಸ್ಯರು ಪ್ರಧಾನಿ ಅವರ ಜತೆ ಚಪ್ಪಾಳೆ ತಟ್ಟುತ್ತೇವೆ ಮತ್ತು ಸಂಸತ್‌ ಭವನದ ಆವರಣದಲ್ಲಿ ದೀಪಗಳನ್ನು ಹಚ್ಚುತ್ತೇವೆ’ ಎಂದು ಹೇಳಿದರು.

ADVERTISEMENT

‘ಕೊರೊನಾ ನಿಯಂತ್ರಿಸಲು ಥರ್ಮಾಮೀಟರ್‌ ಮತ್ತು ಆಕ್ಸಿಮೀಟರ್‌ ಸೇರಿದಂತೆ ವಿವಿಧ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪಗಳಿವೆ. ಸಂಕಷ್ಟದ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸುವ ಅವಕಾಶವನ್ನು ಸರ್ಕಾರ ಬಳಸಿಕೊಂಡಿದೆ’ ಎಂದು ಆಪ್‌ ಸದಸ್ಯರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಸುಧಾನ್ಶು ತ್ರಿವೇದಿ, ‘ಪ್ರಧಾನಿ ಅವರು ನೀಡಿದ್ದ ಕರೆ ಸಾಂಕೇತಿವಾಗಿತ್ತು. ಕೊರೊನಾ ನಿಯಂತ್ರಿಸುವಲ್ಲಿ ತೊಡಗಿದವರ ಆತ್ಮಸ್ಥೈರ್ಯ ಹೆಚ್ಚಿಸುವುದಾಗಿತ್ತು. ಜತೆಗೆ, ಸಂಕಷ್ಟದ ಸಂದರ್ಭದಲ್ಲಿ ದೇಶವನ್ನು ಒಗ್ಗಡಿಸುವುದಾಗಿತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರು ಚರಕ ಚಿಹ್ನೆಯನ್ನು ಬಳಸಿ ಒಗ್ಗೂಡಿಸುವ ಕಾರ್ಯ ಕೈಗೊಂಡಿದ್ದರು. ಅದೇ ಮಾದರಿಯನ್ನು ಪ್ರಧಾನಿ ಅವರು ಅನುಸರಿಸಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.