ADVERTISEMENT

ಒಡಿಶಾ ಗಣಿ ವಲಯದಲ್ಲಿ ₹ 9 ಲಕ್ಷ ಕೋಟಿ ಹಗರಣ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

ಪಿಟಿಐ
Published 11 ಜನವರಿ 2024, 3:28 IST
Last Updated 11 ಜನವರಿ 2024, 3:28 IST
<div class="paragraphs"><p>ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌</p></div>

ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌

   

ಭುವನೇಶ್ವರ: ರಾಜ್ಯದ ಗಣಿ ವಲಯದಲ್ಲಿ 2000–14ರ ಅವಧಿಯಲ್ಲಿ ಬರೋಬ್ಬರಿ ₹ 9 ಲಕ್ಷ ಕೋಟಿ ಅಕ್ರಮ ನಡೆದಿದೆ. ಈ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಒಡಿಶಾದಲ್ಲಿ 2000ರಿಂದ ಅಧಿಕಾರದಲ್ಲಿದೆ.

ADVERTISEMENT

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕ ಜಯನಾರಾಯಣ್‌ ಮಿಶ್ರಾ, ರಾಜ್ಯದಲ್ಲಿ ಒಟ್ಟು ₹ 8.97 ಕೋಟಿಯಷ್ಟು ಗಣಿ ಅಕ್ರಮ ನಡೆದಿದೆ. ಈ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರಿಗೆ ತಿಳಿದಿರಬಹುದು ಮತ್ತು ಇದೆಲ್ಲವು ಅವರ ಉಸ್ತುವಾರಿಯಲ್ಲಿಯೇ ನಡೆದಿರಬಹುದು ಎಂಬ ಅನುಮಾನಗಳು ಮೂಡುತ್ತಿವೆ ಎಂದಿದ್ದಾರೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದು ಸೂಕ್ತ ಎಂದೂ ಹೇಳಿರುವ ಅವರು, ಈ ಬಗ್ಗೆ ರಾಷ್ಟ್ರಪತಿ, ಪ್ರಧಾನಿ, ಒಡಿಶಾ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

'ಈ ವಿಚಾರವಾಗಿ ಪ್ರಧಾನಿ ಅವರೊಂದಿಗೆ ಮಾತನಾಡಿದ್ದೇನೆ. ಅಕ್ರಮಗಳ ಬಗ್ಗೆ ಕೇಳಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ' ಎಂದೂ ಹೇಳಿದ್ದಾರೆ.

'ಬಹುಸಮಯದಿಂದ ಆರೋಗ್ಯ ಸರಿ ಇರಲಿಲ್ಲ'
ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ದೀರ್ಘಕಾಲದಿಂದ ಗಣಿ ಅಕ್ರಮ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಆದರೆ, ಆರೋಗ್ಯ ಸರಿಯಿಲ್ಲದೆ ಬಹುಸಮಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಈ ವಿಚಾರವನ್ನು ಸಾರ್ವಜನಿಕರೆದುರು ಪ್ರಸ್ತಾಪಿಸಿರಲಿಲ್ಲ. ಆಸ್ಪತ್ರೆಯಿಂದ ಬಂದ ನಂತರ ಇದನ್ನು ಮುನ್ನೆಲೆಗೆ ತಂದಿದ್ದೇನೆ' ಎಂದಿದ್ದಾರೆ.

ರಾಜ್ಯದಲ್ಲಿ ಗುತ್ತಿಗೆ ನೀಡಲಾಗಿರುವ 192 ಗಣಿ ಉದ್ಯಮಗಳ ಪೈಕಿ, 176 ಅರಣ್ಯ ಪ್ರದೇಶದಲ್ಲಿವೆ, ಇವು ಪರಿಸರ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಾರ್ಯಾಚರಿಸುತ್ತಿವೆ. ಇವುಗಳಿಂದ ನದಿಗಳು, ಪ್ರಾಣಿಸಂಕುಲ ಮತ್ತು ಸಸ್ಯವರ್ಗಕ್ಕೆ ಅಪಾಯ ಎದುರಾಗಿದೆ ಎಂದು ದೂರಿದ್ದಾರೆ.

ಈ ಆರೋಪವನ್ನು ಬಿಜೆಡಿ ನಾಯಕ ಹಾಗೂ ಶಾಸಕ ಬದ್ರಿನಾರಾಯಣ್‌ ಪಾತ್ರಾ ಅಲ್ಲಗಳೆದಿದ್ದಾರೆ.

'ಜನರನ್ನು ದಾರಿ ತಪ್ಪಿಸುವುದಕ್ಕಾಗಿ ಮತ್ತು ಮುಂಬರುವ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವುದಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುವುದು ಅವರಿಗೆ (ವಿರೋಧಿಗಳಿಗೆ) ಅಭ್ಯಾಸವಾಗಿಬಿಟ್ಟಿದೆ' ಎಂದು ಮಾಜಿ ಸಚಿವರೂ ಆಗಿರುವ ಪಾತ್ರಾ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.