ADVERTISEMENT

ರಾಹುಲ್‌, ಪ್ರಿಯಾಂಕಾ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಪಂಜಾಬ್‌: ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪ

ಪಿಟಿಐ
Published 24 ಅಕ್ಟೋಬರ್ 2020, 8:26 IST
Last Updated 24 ಅಕ್ಟೋಬರ್ 2020, 8:26 IST
ಪ್ರಕಾಶ್‌ ಜಾವಡೇಕರ್‌
ಪ್ರಕಾಶ್‌ ಜಾವಡೇಕರ್‌   

ನವದೆಹಲಿ: ‘ಬಿಹಾರ ಮೂಲದ ವಲಸೆ ಕಾರ್ಮಿಕ ಕುಟುಂಬದ ಆರು ವರ್ಷದ ಬಾಲಕಿ ಮೇಲೆ ಪಂಜಾಬ್‌ನಲ್ಲಿ ಅತ್ಯಾಚಾರವೆಸಗಿ, ಹತ್ಯೆಗೈಯಲಾಗಿದೆ’ ಎಂದು ಆರೋಪಿಸಿರುವ ಬಿಜೆಪಿ, ‘ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಂತ್ರಸ್ತೆಯ ‍‍ಕುಟುಂಬದವರನ್ನುಏಕೆ ಭೇಟಿಯಾಗಿಲ್ಲ’ ಎಂದು ಪ್ರಶ್ನಿಸಿದೆ.

‘ಹಾಥರಸ್ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಉತ್ತರ ಪ್ರದೇಶಕ್ಕೆ ತೆರಳಿದ್ದರು. ಆದರೆ ಕಾಂಗ್ರೆಸ್‌ ಆಡಳಿತ ಇರುವ ಪಂಜಾಬ್‌ ಮತ್ತು ರಾಜಸ್ಥಾನದಲ್ಲಿ ಮಹಿಳೆಯರ ಮೇಲೆ ಘೋರ ಅಪರಾಧಗಳು ನಡೆಯುತ್ತಿವೆ. ಆದರೂ ಏಕೆ ಅವರು ಅಲ್ಲಿಗೆ ತೆರಳಿ ಸಂತ್ರಸ್ತೆಯ ಕುಟುಂಬದವರನ್ನು ಈವರೆಗೆ ಭೇಟಿಯಾಗಲಿಲ್ಲ. ಹಾಥರಸ್‌ ಭೇಟಿ ಕೇವಲ ರಾಜಕೀಯ ಪ್ರವಾಸವಾಗಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಶನಿವಾರ ಟೀಕಿಸಿದರು.

‘ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಸಚಿವ ವಿಜಯ್ ಸಂಪ್ಲಾ ಅವರು ಘಟನೆ ನಡೆದಿರುವ ತಾಂಡಾ ಬಳಿಯ ಜಲಾಲ್‌ಪುರ ಗ್ರಾಮಕ್ಕೆ ತೆರಳಿ ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನ ಯಾರೊಬ್ಬರು ಗ್ರಾಮಕ್ಕೆ ಭೇಟಿ ನೀಡಿಲ್ಲ’ಎಂದು ಜಾವಡೇಕರ್‌ ಟೀಕಿಸಿದರು.

ADVERTISEMENT

‘ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿಗೆ ಕಾಣಿಸುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಪಕ್ಷದ ಆಡಳಿತವಿರುವ ರಾಜ್ಯದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಆರ್‌ಜೆಡಿ ನಾಯಕ ತೇಜಸ್ವಿ ಮೌನವಾಗಿದ್ದಾರೆ. ತಮ್ಮ ರಾಜ್ಯದ ಮಗಳ ಮೇಲೆ ದೌರ್ಜನ್ಯ ನಡೆದಿದ್ದರೂ ಅವರು ಮಾತನಾಡುತ್ತಿಲ್ಲ. ಬದಲಿಗೆ ಕಾಂಗ್ರೆಸ್‌ಗೆ ಬೆಂಬಲಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಈ ಘಟನೆಯ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಜಲಾಲ್‌ಪುರದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಬಳಿಕ ಆಕೆಯನ್ನು ಸಜೀವ ದಹನಕ್ಕೆ ಯತ್ನಿಸಲಾಗಿದೆ. ಅರ್ಧ ಸುಟ್ಟಆಕೆಯ ಶವ ಮನೆಯೊಂದರಲ್ಲಿ ‍ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಆರೋಪಿಗಳಾದ ಗುರ್ಪ್ರೀತ್‌ ಸಿಂಗ್‌, ಆತನ ಅಜ್ಜ ಸುರ್ಜೀತ್‌ಸಿಂಗ್‌ ಎಂಬುವವರನ್ನು ಬಂಧಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.