ADVERTISEMENT

Bharath Jodo Yatra| ‘ಕೈ’ ಯಾತ್ರೆ ವಿರುದ್ಧ ಬಿಜೆಪಿ ವಾಗ್ದಾಳಿ

‘ಭಾರತ ಒಗ್ಗೂಡಿಸಿ’ಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್‌ ನಾಯಕರು

ಪಿಟಿಐ
Published 7 ಸೆಪ್ಟೆಂಬರ್ 2022, 18:47 IST
Last Updated 7 ಸೆಪ್ಟೆಂಬರ್ 2022, 18:47 IST
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಇತರ ನಾಯಕರು ತಮಿಳುನಾಡಿನ ಶ್ರೀಪೆರುಂಬುದೂರ್‌ನಲ್ಲಿರುವ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಸ್ಮಾರಕಕ್ಕೆ ಬುಧವಾರ ಭೇಟಿ ನೀಡಿ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಇತರ ನಾಯಕರು ತಮಿಳುನಾಡಿನ ಶ್ರೀಪೆರುಂಬುದೂರ್‌ನಲ್ಲಿರುವ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಸ್ಮಾರಕಕ್ಕೆ ಬುಧವಾರ ಭೇಟಿ ನೀಡಿ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ   

ನವದೆಹಲಿ/ಕನ್ಯಾಕುಮಾರಿ: ‘ಭಾರತ ಒಗ್ಗೂಡಿಸಿ’ ಯಾತ್ರೆಯ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಬುಧವಾರ ವಾಕ್ಸಮರ ನಡೆದಿದೆ. ಬಿಜೆಪಿ ಮುಖಂಡರು ಯಾತ್ರೆಯನ್ನು ಪ್ರಶ್ನಿಸಿದ್ದರೆ, ಕಾಂಗ್ರೆಸ್‌ ಮುಖಂಡರು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ಯಾತ್ರೆಯು ಎರಡನೇ ಸ್ವಾತಂತ್ರ್ಯ ಸಮರವಾಗಿದೆ. ಇದರಲ್ಲಿ ಬಿಜೆಪಿಗೆ ಯಾವ ಪಾತ್ರವೂ ಇಲ್ಲ. ಆದರೆ, ಈ ಯಾತ್ರೆಯಿಂದಾಗಿ ಆ ಪಕ್ಷವು ನಿರ್ನಾಮವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

ಮಹಾತ್ಮ ಗಾಂಧಿ ಅವರು ಮಾಡು ಇಲ್ಲವೇ ಮಡಿ ಎಂಬ ಘೋಷಣೆಯನ್ನು ಕೊಟ್ಟ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಗೆ ಯಾವ ಪಾತ್ರವೂ ಇರಲಿಲ್ಲ. ‘ಒಗ್ಗೂಡೋಣ ಎಂದು ನಾವು ಹೇಳಿದರೆ, ವಿಭಜಿಸೋಣ’ ಎಂದು ಅವರು ಹೇಳುತ್ತಾರೆ ಎಂದು ಚಿದಂಬರಂ ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ‘ಭಾರತ ಒಗ್ಗೂಡಿಸಿ’ ಯಾತ್ರೆಯನ್ನು ಟೀಕಿಸಿದ್ದಾರೆ. ರಾಹುಲ್ ಅವರ ಪೂರ್ವಜರು ಭಾರತವನ್ನು ವಿಭಜಿಸಿದ್ದರ ಕುರಿತು ವಿಷಾದವಿದ್ದರೆ, ಪಾಕಿಸ್ತಾನ, ಬಾಂಗ್ಲಾ
ದೇಶವನ್ನು ಭಾರತದ ಜತೆಗೆ ಸೇರಿಸಲು ಅವರು ಯತ್ನಿಸಲಿ ಎಂದು ಶರ್ಮಾ ಅವರು ಹೇಳಿದ್ದಾರೆ. ಅಖಂಡ ಭಾರತವನ್ನು ಸೃಷ್ಟಿಸಲು ಅವರು ಪ್ರಯತ್ನ ಮಾಡಲಿ ಎಂದಿದ್ದಾರೆ.

ADVERTISEMENT

1947ರಲ್ಲಿ ಒಮ್ಮೆ ಮಾತ್ರ ಭಾರತವು ವಿಭಜನೆಗೊಂಡಿತು. ಕಾಂಗ್ರೆಸ್ ಪಕ್ಷವು ವಿಭಜನೆಗೆ ಒಪ್ಪಿಕೊಂಡದ್ದು ಅದಕ್ಕೆ ಕಾರಣ. ರಾಹುಲ್ ಅವರಿಗೆ ಒಗ್ಗೂಡಿಸುವುದು ಬೇಕಿದ್ದರೆ ಅವರ ಯಾತ್ರೆಯು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹಿಂದೆ ಕಾಂಗ್ರೆಸ್‌ನಲ್ಲಿಯೇ ಇದ್ದ ಶರ್ಮಾ ಹೇಳಿದ್ದಾರೆ.

ರಾಜೀವ್‌ ಸ್ಮಾರಕಕ್ಕೆ ಭೇಟಿ: ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಅವರು ‘ಭಾರತವನ್ನು ಒಗ್ಗೂಡಿಸಿ’ ಯಾತ್ರೆಗೆ ಚಾಲನೆ ನೀಡುವುದಕ್ಕೆ ಮುನ್ನ, ತಮ್ಮ ತಂದೆ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ಕೊಟ್ಟರು. ಈ ಸ್ಮಾರಕವು ಶ್ರೀಪೆರುಂಬುದೂರ್‌ನಲ್ಲಿದೆ. ‘ದ್ವೇಷ ಮತ್ತು ವಿಭಜನೆಯ ರಾಜಕಾರಣಕ್ಕೆ ನನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳುವುದಿಲ್ಲ’ ಎಂದು ಈ ಸಂದರ್ಭದಲ್ಲಿ ಅವರು ಪ್ರತಿಜ್ಞೆ ಮಾಡಿದರು.

ಇಲ್ಲಿ ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಅವರು ಭಾಗಿಯಾದರು.

‘ದ್ವೇಷ ಮತ್ತು ವಿಭಜನೆಯ ರಾಜ ಕಾರಣಕ್ಕೆ ನನ್ನ ತಂದೆ ಬಲಿಯಾದರು. ಆದರೆ, ನನ್ನ ದೇಶವನ್ನೂ ಹಾಗೆಯೇ ಕಳೆದುಕೊಳ್ಳಲು ನಾನು ಬಯಸು ವುದಿಲ್ಲ. ಪ್ರೀತಿಯು ದ್ವೇಷವನ್ನು ಗೆಲ್ಲು ತ್ತದೆ. ಭರವಸೆಯು ಭೀತಿಯನ್ನು ಸೋಲಿಸುತ್ತದೆ. ಎಲ್ಲರೂ ಜತೆಯಾಗಿ ನಾವು ಇವುಗಳನ್ನು ಗೆಲ್ಲಬಹುದು’ ಎಂದು ರಾಹುಲ್‌ ಟ್ವಿಟರ್‌ನಲ್ಲಿ ಹೇಳಿ ಕೊಂಡಿದ್ದಾರೆ. ರಾಜೀವ್ ಅವರನ್ನು ಆತ್ಮಹತ್ಯಾ ಬಾಂಬರ್‌ ಮೂಲಕ ಎಲ್‌ಟಿಟಿಇ 1991ರಲ್ಲಿ ಶ್ರೀಪೆರಂಬುದೂರ್‌ನಲ್ಲಿ ಹತ್ಯೆ ಮಾಡಿತ್ತು.

ರಾಹುಲ್‌ ಅವರು ಚೆನ್ನೈಗೆ ಮಂಗಳವಾರ ರಾತ್ರಿಯೇ ಬಂದಿದ್ದರು.

ಪೋಸ್ಟರ್‌ನಲ್ಲಿ ವಾದ್ರಾ: ಬಿಜೆಪಿ ಟೀಕೆ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಗಂಡ, ಉದ್ಯಮಿ ರಾಬರ್ಟ್ ವಾದ್ರಾ ಅವರು ‘ಭಾರತವನ್ನು ಒಗ್ಗೂಡಿಸಿ’ ಯಾತ್ರೆಯ ಪೋಸ್ಟರ್‌ನ ಫೋಟೊಗಳನ್ನು ಟ್ವೀಟ್‌ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ವಾದ್ರಾ ಅವರ ಫೋಟೊ ಕೂಡ ಇದೆ. ಇದು ಬಿಜೆಪಿಯ ಟೀಕೆಗೆ ಕಾರಣವಾಗಿದೆ. ಭ್ರಷ್ಟಾಚಾರದ ವಿರುದ್ಧ ವಾದ್ರಾ ಅವರು ಮಾತನಾಡ
ಲಿದ್ದಾರೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ವಾದ್ರಾ ಅವರು ಯಾತ್ರೆಯಲ್ಲಿ ಸೇರಿಕೊಂಡಿದ್ದಾರೆ ಎಂಬುದು ಸೋಜಿಗ ಉಂಟು ಮಾಡಿದೆ ಎಂದು ಬಿಜೆಪಿ ಮುಖಂಡ ರವಿಶಂಕರ ಪ್ರಸಾದ್‌ ಹೇಳಿದ್ದಾರೆ.

‘ಭಾರತವನ್ನು ಒಗ್ಗೂಡಿಸಿ ಯಾತ್ರೆಯು ನಿಜವಾಗಿ ಪರಿವಾರವನ್ನು ಒಗ್ಗೂಡಿಸಿ ಮತ್ತು ಭ್ರಷ್ಟಾಚಾರವನ್ನು ಒಗ್ಗೂಡಿಸಿ ಯಾತ್ರೆಯಾಗಿದೆ’ ಎಂದು ಬಿಜೆಪಿ ವಕ್ತಾರ ಶೆಹಜಾದ್ ಜೈ ಹಿಂದ್‌ ಹೇಳಿದ್ದಾರೆ.

ಜಮೀನು ಖರೀದಿಯಲ್ಲಿ ಭ್ರಷ್ಟಾಚಾರ ಎಸಗಲಾಗಿದೆ ಎಂಬ ಆರೋಪದ ಕೆಲವು ಪ್ರಕರಣಗಳು ವಾದ್ರಾ ವಿರುದ್ಧ ದಾಖಲಾಗಿವೆ.

***

ಭವ್ಯ ಪರಂಪರೆಯ ನಮ್ಮ ಪಕ್ಷಕ್ಕೆ ಇದೊಂದು ಮಹತ್ವದ ಸಂದರ್ಭ. ಈ ಯಾತ್ರೆಯು ಪಕ್ಷಕ್ಕೆ ಚೈತನ್ಯ ತುಂಬಲಿದೆ ಎಂಬ ವಿಶ್ವಾಸ ನನಗಿದೆ

– ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ, ಸಿಲ್ಚರ್‌ನಿಂದ ಸೌರಾಷ್ಟ್ರದವರೆಗೆ ದೇಶವು ಒಗ್ಗಟ್ಟಾಗಿಯೇ ಇದೆ. ದೇಶವನ್ನು ಒಗ್ಗೂಡಿಸುವ ಅಗತ್ಯವೇನೂ ಇಲ್ಲ

- ಹಿಮಂತ ಬಿಸ್ವ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ

ಭಾರತ ಒಗ್ಗೂಡಿಸಿ ಯಾತ್ರೆಯು ದೇಶದ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ವಿಭಜನಕಾರಿ ಶಕ್ತಿಗಳು ಸೋಲುವವರೆಗೆ ಇದು ಮುಂದುವರಿಯಲಿದೆ

- ಪಿ.ಚಿದಂಬರಂ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.