ADVERTISEMENT

ಬಿಜೆಪಿ ಬೆಂಬಲಿಗರ ಮೇಲೆ ಗುಂಡು ಹಾರಿಸಬಹುದಿತ್ತು. ಆದರೆ..: ಮಮತಾ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಸೆಪ್ಟೆಂಬರ್ 2022, 14:26 IST
Last Updated 14 ಸೆಪ್ಟೆಂಬರ್ 2022, 14:26 IST
ಕೋಲ್ಕತ್ತದಲ್ಲಿ ಬಿಜೆಪಿ ಬೆಂಬಲಿಗರು ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿರುವುದು
ಕೋಲ್ಕತ್ತದಲ್ಲಿ ಬಿಜೆಪಿ ಬೆಂಬಲಿಗರು ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿರುವುದು    

ಕೋಲ್ಕತ್ತ: ಬಿಜೆಪಿ ಕೈಗೊಂಡಿದ್ದ ‘ನಬಾನ್ನ ಚಲೊ ಅಭಿಯಾನ’ (ರಾಜ್ಯ ಸಚಿವಾಲಯಕ್ಕೆ ಕಾಲ್ನಡಿಗೆ ಜಾಥಾ) ಮಂಗಳವಾರ ಹಿಂಸಾಚಾರಕ್ಕೆ ತಿರುಗಿತ್ತು.

ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಶಸ್ತ್ರಸಜ್ಜಿತ ಗೂಂಡಾಗಳನ್ನು ಹೊರಗಿನಿಂದ ಬಿಜೆಪಿ ಕರೆತಂದಿದೆ’ ಎಂದು ಆರೋಪಿಸಿದ್ದಾರೆ.

‘ಹಿಂಸೆಗಿಳಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಗುಂಡು ಹಾರಿಸಬಹುದಿತ್ತು. ಆದರೆ, ಸರ್ಕಾರ ಸಂಯಮ ವಹಿಸಿತು’ ಎಂದು ತಿಳಿಸಿದ್ದಾರೆ.

ADVERTISEMENT

‘ನಿನ್ನೆ ಅನೇಕ ಪೊಲೀಸರು ಗಾಯಗೊಂಡಿದ್ದಾರೆ. ರಾಜಕಾರಣ ಹಾಗೂ ಸಮಾಜವಿರೋಧಿ ಚಟುವಟಿಕೆಗಳು ಒಂದಾಗಿ ನಡೆಯಲು ಸಾಧ್ಯವಿಲ್ಲ. ಬೆಂಕಿ ಹಚ್ಚುವುದು ಮತ್ತು ಪೊಲೀಸರ ಮೇಲೆ ದಾಳಿ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಕಾನೂನು ತನ್ನ ಮಾರ್ಗವನ್ನು ಅನುಸರಿಸಲಿದೆ’ ಎಂದು ಎಚ್ಚರಿಸಿದ್ದಾರೆ.

‘ಶಾಂತಿಯುತ ಪ್ರತಿಭಟನೆಯಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಗೂಂಡಾಗಿರಿಯನ್ನು ನಾವು ಸಹಿಸಲಾಗುವುದಿಲ್ಲ’ ಎಂದು ಮಮತಾ ಎಚ್ಚರಿಸಿದ್ದಾರೆ.

ಮಂಗಳವಾರ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನಡೆದ ಘರ್ಷಣೆ ತಾರಕಕ್ಕೇರಿ, ಕೋಲ್ಕತ್ತದ ಜನಜೀವನ ಅಸ್ತವ್ಯಸ್ತಗೊಂಡಿತು.

ಪ್ರತಿಭಟನಕಾರರು ನಗರದ ಕೇಂದ್ರ ಭಾಗದಲ್ಲಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿ, ಪೊಲೀಸರತ್ತ ಕಲ್ಲುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿ ಪ್ರತಿಭಟನಕಾರರನ್ನು ಚದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.