ಲಾಲು
ಪಟ್ನಾ: ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಅವರ ವಿರುದ್ಧ ಬಿಹಾರ ಬಿಜೆಪಿ ದೂರು ದಾಖಲಿಸಿದೆ.
ಇತ್ತೀಚೆಗೆ ಲಾಲು ಪ್ರಸಾದ್ ಯಾದವ್ ಅವರು ತಮ್ಮ 78ನೇ ಜನ್ಮದಿನದ ಪ್ರಯುಕ್ತ ಮನೆಯಲ್ಲಿಯೇ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಅವರಿಗೆ ಅಭಿಮಾನಿಗಳು ಅಂಬೇಡ್ಕರ್ ಭಾವಚಿತ್ರ ನೀಡಿದ್ದರು. ಆದರೆ, ಲಾಲು ಅವರು ತಮ್ಮ ಕಾಲಿನ ಬಳಿ ಅಂಬೇಡ್ಕರ್ ಭಾವಚಿತ್ರವನ್ನು ಇಡುವಂತೆ ಸೂಚಿಸಿದ್ದಾರೆ. ದುರಂಹಕಾರದಿಂದ ವರ್ತಿಸಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಲಾಲು ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಬಿಜೆಪಿ ವತಿಯಿಂದ ದೂರು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಲಾಲು ಅವರು ದಲಿತರನ್ನು ಹಾಗೂ ಶೋಷಿತರ ನಾಯಕರನ್ನು ತಿರಸ್ಕಾರದಿಂದ ಕಾಣುತ್ತಾರೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಅವರ ದುರಹಂಕಾರದಿಂದ ಎಷ್ಟೊ ನಾಯಕರು, ಮತದಾರರು ಅವರಿಂದ ದೂರ ಹೋದರು ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಈ ಮೊದಲು ಸುಮಾರು 20 ವರ್ಷ ಆರ್‌ಜೆಡಿಯಲ್ಲಿದ್ದರು.
ಇನ್ನು, ಅಂಬೇಡ್ಕರ್ ಭಾವಚಿತ್ರಕ್ಕೆ ಲಾಲು ಅವಮಾನ ಮಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು, ಇದು ಬಿಜೆಪಿ ಚುನಾವಣಾ ಕಾರಣಕ್ಕೆ ಮಾಡುತ್ತಿರುವ ಗಿಮಿಕ್ ಎಂದು ಆರ್‌ಜೆಡಿ ತಿರುಗೇಟು ನೀಡಿದೆ.
ಈ ವರ್ಷಾಂತ್ಯಕ್ಕೆ ಬಿಹಾರ ವಿಧಾನಸಭೆಗೆ ಚುನಾವಣೆ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.