ADVERTISEMENT

ಬಿಜೆಪಿಗೆ ‘ಹೆರಾಲ್ಡ್‌ ಅಸ್ತ್ರ’

ಪಿಟಿಐ
Published 22 ಡಿಸೆಂಬರ್ 2018, 20:14 IST
Last Updated 22 ಡಿಸೆಂಬರ್ 2018, 20:14 IST
ರವಿಶಂಕರ್‌ ಪ್ರಸಾದ್‌
ರವಿಶಂಕರ್‌ ಪ್ರಸಾದ್‌   

ನವದೆಹಲಿ: ಕಾಂಗ್ರೆಸ್‌ ಮುಖವಾಣಿ‘ನ್ಯಾಷನಲ್ ಹೆರಾಲ್ಡ್’ ಪತ್ರಿಕಾ ಕಚೇರಿಯಿರುವ ದೆಹಲಿಯ ‘ಹೆರಾಲ್ಡ್ ಹೌಸ್‌’ ಕಟ್ಟಡ ತೆರವು ಮಾಡುವಂತೆ ದೆಹಲಿ ಹೈಕೋರ್ಟ್‌ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ಗೆ (ಎಜೆಎಲ್) ತಾಕೀತು ಮಾಡಿದ ಬೆನ್ನಲ್ಲೇ ಬಿಜೆಪಿಯು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದೆ.

‘ಗಾಂಧಿ ಕುಟುಂಬ ಸ್ವಂತಕ್ಕಾಗಿ ಸಾರ್ವಜನಿಕ ಆಸ್ತಿ ಬಳಸಿಕೊಂಡಿದೆ’ ಎಂದು ಕೇಂದ್ರದ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಶನಿವಾರ ಆರೋಪಿಸಿದ್ದಾರೆ. ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಅವರ ತಾಯಿ ಸೋನಿಯಾ ಗಾಂಧಿ ಮತ್ತುಕುಟುಂಬದ ಸದಸ್ಯರು ಸಾರ್ವಜನಿಕ ಆಸ್ತಿಯನ್ನು ದುರುಪಯೋಗ ಪಡಿಸಿಕೊಂಡಿರುವುದು ದೆಹಲಿ ಹೈಕೋರ್ಟ್‌ ಆದೇಶದಿಂದ ಗೊತ್ತಾಗುತ್ತದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ರಫೇಲ್‌ ಒಪ್ಪಂದ ಕುರಿತು ನಮ್ಮನ್ನು ಪ್ರಶ್ನಿಸುವದಕ್ಕೂ ಮೊದಲು ತಾವು ಮೊದಲು ಯಾವ ಸ್ಥಾನದಲ್ಲಿದ್ದೇವೆ ಎಂಬುದನ್ನು ಅವರು ಅರಿತುಕೊಳ್ಳಬೇಕು’ ಎಂದು ಪ್ರಸಾದ್‌ ಹೇಳಿದ್ದಾರೆ.

ADVERTISEMENT

‘ಕೋರ್ಟ್‌ ಆದೇಶದ ಕುರಿತು ಕಾಂಗ್ರೆಸ್‌ ನಾಯಕರು ಪ್ರತಿಕ್ರಿಯೆ ನೀಡಲೇಬೇಕು. ₹5,000 ಕೋಟಿ ಬೆಲೆ ಬಾಳುವ ಸಾರ್ವಜನಿಕ ಆಸ್ತಿಯನ್ನು ಗಾಂಧಿ ಕುಟುಂಬ ತಮ್ಮ ಒಡೆತನದ ಟ್ರಸ್ಟ್‌ಗೆ ಕೇವಲ ₹50 ಲಕ್ಷಕ್ಕೆರಹಸ್ಯವಾಗಿ ವರ್ಗಾಯಿಸಿರುವ ಬಗ್ಗೆ ಉತ್ತರ ಕೊಡಬೇಕು’ ಎಂದು ಪ್ರಸಾದ್‌ ಅವರು ಒತ್ತಾಯಿಸಿದ್ದಾರೆ.

**

‘ಸುಪ್ರೀಂ’ಗೆ ಅರ್ಜಿ; ಕಾಂಗ್ರೆಸ್‌ ನಿರ್ಧಾರ

ನವದೆಹಲಿ:‘ನ್ಯಾಷನಲ್ ಹೆರಾಲ್ಡ್’ ಪತ್ರಿಕಾ ಕಚೇರಿಯ ಕಟ್ಟಡ ತೆರವು ಮಾಡಿ ಎಂದು ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ಗೆ (ಎಜೆಎಲ್) ದೆಹಲಿ ಹೈಕೋರ್ಟ್‌ ನೀಡಿರುವ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

‘ಈ ವಿಷಯದಲ್ಲಿ ಅಕ್ರಮವಾಗಿ ಮತ್ತು ಕಾನೂನು ವಿರುದ್ಧವಾಗಿ ಯಾವುದೇ ಚಟುವಟಿಕೆ ನಡೆದಿಲ್ಲ. ನಮಗೆ ನ್ಯಾಯ ಸಿಗಲಿದೆ ಎಂಬ ಭರವಸೆ ಇದೆ’ ಎಂದು ಕಾಂಗ್ರೆಸ್‌ ಹೇಳಿದೆ.

‘ದೆಹಲಿ ಹೈಕೋರ್ಟ್‌ ಆದೇಶ ನೀಡಿದೆ. ಆದರೆ, ಇದೇ ಅಂತಿಮವಲ್ಲ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇವೆ. ಇದಕ್ಕಾಗಿ ತಯಾರಿ ನಡೆಸಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ. ನಮ್ಮ ಬಳಿ ಬಲವಾದ ಸಾಕ್ಷ್ಯಗಳಿದ್ದು, ಅಂತಿಮ ಗೆಲುವು ಎಜೆಎಲ್‌ಗೆ ಸಿಗಲಿದೆ’ ಎಂದು ಕಾಂಗ್ರೆಸ್‌ ನಾಯಕ ಜೈವೀರ್‌ ಶೇರ್‌ಗಿಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.