ಭೋಪಾಲ್: ರಾಜಧಾನಿ ಭೋಪಾಲ್ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳನ್ನು ಒಳಗೊಂಡಿರುವ ಮಧ್ಯಪ್ರದೇಶದ ಕೇಂದ್ರ ಭಾಗವು ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಬಾರಿ ಇಲ್ಲಿ ಮತ್ತೆ ನೆಲೆ ಕಂಡುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ.
ಇಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಸಮೀಕರಣಕ್ಕೆ ಅನುಗುಣವಾಗಿ ತಾನು ಕೆಲಸ ಮಾಡಿದ್ದು, ಭದ್ರಕೋಟೆಯ ಮೇಲಿನ ತನ್ನ ಹಿಡಿತ ಇನ್ನಷ್ಟು ಬಿಗಿಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲಾಗಿದೆ, ಈ ಬಾರಿ ಇಲ್ಲಿನ ಫಲಿತಾಂಶವು ಹಿಂದಿನ ಬಾರಿಯ ಫಲಿತಾಂಶಕ್ಕಿಂತ ಭಿನ್ನವಾಗಿರುತ್ತದೆ ಎಂದು ಕಾಂಗ್ರೆಸ್ ಹೇಳುತ್ತಿದೆ.
ಈ ಭಾಗದಲ್ಲಿ ಬಿಜೆಪಿಯ ಪ್ರಾಬಲ್ಯವು ಈ ಬಾರಿಯೂ ಮುಂದುವರಿಯಲಿದೆ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ‘ಮಧ್ಯ ಭಾರತ’ ಎಂದು ಕೆಲವರು ಕರೆಯುವ ಈ ಭಾಗದಲ್ಲಿ ಒಟ್ಟು 36 ವಿಧಾನಸಭಾ ಕ್ಷೇತ್ರಗಳಿವೆ. ಇವು ಎಂಟು ಜಿಲ್ಲೆಗಳಲ್ಲಿ ವ್ಯಾಪಿಸಿಕೊಂಡಿವೆ. 2013ರಲ್ಲಿ ಇಲ್ಲಿ ಬಿಜೆಪಿ ಒಟ್ಟು 30 ಸ್ಥಾನಗಳನ್ನು, 2018ರಲ್ಲಿ 24 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಇಲ್ಲಿ ಈಗ 12 ಸ್ಥಾನಗಳನ್ನು ಹೊಂದಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರತಿನಿಧಿಸುವ ಬುಧ್ನಿ ಕ್ಷೇತ್ರ ಕೂಡ ಈ ಭಾಗಕ್ಕೇ ಸೇರಿದೆ.
ಚೌಹಾಣ್ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಕ್ರಮ್ ಮಸ್ತಾಲ್ ಅವರು ಕಣಕ್ಕಿಳಿದಿದ್ದಾರೆ. ಇವರು ಟಿ.ವಿ. ಧಾರಾವಾಹಿಯೊಂದರಲ್ಲಿ ಹನುಮಂತನ ಪಾತ್ರ ನಿರ್ವಹಿಸಿದ್ದರು. ಸಮಾಜವಾದಿ ಪಕ್ಷದಿಂದ ಮಿರ್ಚಿ ಬಾಬಾ ಕಣದಲ್ಲಿದ್ದಾರೆ. ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಗೆಲ್ಲಲಿ ಎಂದು ಬಯಸಿ ಮೆಣಸಿನ ಕಾಯಿ ಹವನ ಮಾಡಿದವರು ಈ ಬಾಬಾ.
ಭೋಪಾಲ್ ನಗರದ ಹೊರವಲಯದಲ್ಲಿ ಇರುವ ಭೋಜ್‌ಪುರ್ ಕ್ಷೇತ್ರವು 2003ರ ಅವಧಿಯನ್ನು ಹೊರತುಪಡಿಸಿದರೆ, 1982ರಿಂದಲೂ ಬಿಜೆಪಿಯ ತೆಕ್ಕೆಯಲ್ಲಿದೆ. ಹೋಶಂಗಾಬಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಗಿರಿಜಾಶಂಕರ್ ಶರ್ಮ, ಬಿಜೆಪಿಯಿಂದ ಅವರ ಸಹೋದರ ಸೀತಾಶರಣ್ ಶರ್ಮ ಕಣದಲ್ಲಿದ್ದಾರೆ.
ಭಿನ್ನ ಬಗೆಯ ರಾಜಕೀಯ ಪ್ರಭಾವಗಳನ್ನು ಹೊಂದಿದ್ದ ರಾಜ್ಯಗಳ ವಿಲೀನದ ಮೂಲಕ ಮಧ್ಯಪ್ರದೇಶ ರಾಜ್ಯದ ರಚನೆ ಆಗಿದೆ ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತ ಗಿರಿಜಾ ಶಂಕರ್. ಸಿಹೋರ್, ಆಷ್ಟಾ, ಭೋಪಾಲ್ ಮತ್ತು ಅದರ ಸುತ್ತಲಿನ ಪ್ರದೇಶಗಳ ಮೇಲೆ ಆರ್‌ಎಸ್‌ಎಸ್ ಗಮನ ನೀಡಿದ ಕಾರಣದಿಂದಾಗಿ ಅಲ್ಲಿ ಜನಸಂಘದ ಹಾಗೂ ನಂತರ ಬಿಜೆಪಿಯ ಪ್ರಭಾವ ಸೃಷ್ಟಿಯಾಯಿತು ಎಂದು ಅವರು ವಿವರಿಸುತ್ತಾರೆ.
‘ಈ ಬಾರಿಯೂ ಇಲ್ಲೆಲ್ಲ ಬಿಜೆಪಿ ಪ್ರಾಬಲ್ಯ ಮುಂದುವರಿಯುವ ಸಾಧ್ಯತೆಗಳು ಇವೆ’ ಎಂದು ಅವರು ಹೇಳುತ್ತಾರೆ.
ಕೆಲವು ತಪ್ಪುಗಳ ಕಾರಣದಿಂದಾಗಿ ಬೈತೂಲ್ ಮತ್ತು ರಾಜಗಢ ಜಿಲ್ಲೆಗಳಲ್ಲಿ ಈ ಹಿಂದೆ ಪಕ್ಷವು ಕೆಲವು ಸ್ಥಾನಗಳನ್ನು ಕಳೆದುಕೊಂಡಿತ್ತು. ಆದರೆ ಈ ಬಾರಿ ಪಕ್ಷವು ಆ ತಪ್ಪುಗಳನ್ನು ಸರಿಪಡಿಸಿಕೊಂಡಿದೆ. ಭೋಪಾಲ್ ಹಾಗೂ ನರ್ಮದಾಪುರಂ ವಿಭಾಗಗಳ ಸಾಮಾಜಿಕ ಹಾಗೂ ರಾಜಕೀಯ ಸಮೀಕರಣಕ್ಕೆ ಅನುಗುಣವಾಗಿ ಪಕ್ಷ ಕೆಲಸ ಮಾಡಿದೆ, ಅಲ್ಲಿ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ರಜನೀಶ್ ಅಗರ್ವಾಲ್ ಹೇಳುತ್ತಾರೆ.
ಪಕ್ಷದ ಸಂಘಟನೆಯು ದುರ್ಬಲವಾಗಿದ್ದ ಕಾರಣದಿಂದಾಗಿ ಒಳ್ಳೆಯ ಸಾಧನೆ ತೋರಲು ಆಗಿರಲಿಲ್ಲ. ಈ ಬಾರಿ ಪಕ್ಷವು ತಪ್ಪುಗಳನ್ನು ತಿದ್ದಿಕೊಂಡಿದೆ. ಬೂತ್ ಮಟ್ಟದವರೆಗೂ ಪಕ್ಷದ ಸಂಘಟನೆಯನ್ನು ಗಟ್ಟಿಮಾಡಲಾಗಿದೆ. ಹೀಗಾಗಿ 36 ಕ್ಷೇತ್ರಗಳಲ್ಲಿ ಈ ಬಾರಿ ಫಲಿತಾಂಶವು ಭಿನ್ನವಾಗಿರುತ್ತದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ.ಕೆ. ಮಿಶ್ರಾ ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.