ADVERTISEMENT

ಅಣ್ಣಾ ಹಜಾರೆ ಬದುಕಿರಲಿ ಅಥವಾ ಸಾಯಲಿ ಬಿಜೆಪಿಗೆ ಚಿಂತೆಯಿಲ್ಲ: ರಾಜ್‌ ಠಾಕ್ರೆ

ಏಜೆನ್ಸೀಸ್
Published 4 ಫೆಬ್ರುವರಿ 2019, 13:31 IST
Last Updated 4 ಫೆಬ್ರುವರಿ 2019, 13:31 IST
ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ
ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ   

ಪುಣೆ: ಕೇಂದ್ರದಲ್ಲಿ ಲೋಕಪಾಲ್‌ ಅನುಷ್ಠಾನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಅಣ್ಣಾ ಹಜಾರೆ(81) ಅವರನ್ನು ಭೇಟಿ ಮಾಡಿರುವಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ, ಉಪವಾಸ ನಿಲ್ಲಿಸಿ 2019ರಲ್ಲಿ ಬಿಜೆಪಿ ಸರ್ಕಾರವನ್ನು ನಿರ್ನಾಮ ಮಾಡಲು ಶ್ರಮಿಸಿ ಎಂದು ಸಲಹೆ ನೀಡಿದ್ದಾರೆ.

ಸಾಮಾಜಿಕ ಹೋರಾಟಗಾರ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಸತತ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರನ್ನು ಸೋಮವಾರ ಭೇಟಿ ಮಾಡಿದ ರಾಜ್‌ ಠಾಕ್ರೆ ಮಾಧ್ಯಮದವರೊಂದಿಗೆ ಮಾತನಾಡಿದರು.

’ಅವರು ಬದುಕಿರಲಿ ಅಥವಾ ಸಾಯಲಿ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ. ಇಂಥ ಅಪ್ರಯೋಜಕರಿಗಾಗಿ ಜೀವನವನ್ನು ಅಪಾಯಕ್ಕೆ ತಂದುಕೊಳ್ಳುವುದು ಬೇಡ ಎಂದು ತಿಳಿಸಿದ್ದೇನೆ. ಜನರ ಮುಂದೆ ನಡೆಯುವ ಮೂಲಕ ಮುಂಬರುವ ಚುನಾವಣೆಯಲ್ಲಿ ಅವರನ್ನು ಅಂತ್ಯಗೊಳಿಸೋಣ ಎಂದು ಹೇಳಿದ್ದೇನೆ. ಬಿಜೆಪಿ ಜನರನ್ನು ಬಳಸಿಕೊಂಡು ಬಿಸಾಡುತ್ತದೆ. ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. ಪ್ರಧಾನಿ ಹುದ್ದೆಗೇರಿರುವ ಅತಿ ದೊಡ್ಡ ಸುಳ್ಳುಗಾರ. 2013ರ ಡಿಸೆಂಬರ್‌ನಲ್ಲಿ ಅವರು ಲೋಕಪಾಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಅವರೇ ಅಧಿಕಾರದಲ್ಲಿದ್ದಾರೆ, ಆದರೆ ಏನನ್ನೂ ಮಾಡುತ್ತಿಲ್ಲ’ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

’ಮೋದಿ ರೀತಿಯಲ್ಲಿಯೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಸಹ ಅಣ್ಣಾ ಅವರನ್ನು ಬಳಿಸಿಕೊಂಡಿದ್ದಾರೆ, ಈಗ ಹೇಗಿದ್ದಾರೆ ಎಂದೂ ಅವರನ್ನು ವಿಚಾರಿಸುವ ಗೋಜಿಗೆ ಹೋಗಿಲ್ಲ. ಮೋದಿ ಮತ್ತು ಕೇಜ್ರಿವಾಲ್‌ ಇಬ್ಬರೂ ಸಹ ಅಣ್ಣಾ ಅವರನ್ನು ಬಳಸಿಕೊಂಡು, ಈಗ ಬಿಸಾಡಿದ್ದಾರೆ’ ಎಂದರು.

ಕೇಂದ್ರದಲ್ಲಿ ಲೋಕಪಾಲ್‌ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ, ಜ.30ರಿಂದ ಜನ ಆಂದೋಲನ ಸತ್ಯಾಗ್ರಹ ಹೆಸರಿನಲ್ಲಿ ಅಣ್ಣಹಜಾರೆ, ರಾಲೆಗಾನ ಸಿದ್ಧಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ಕೇಂದ್ರ ಸಚಿವರೊಬ್ಬರು ಭೇಟಿ ಮಾಡಿ ವಿಷಯ ಚರ್ಚಿಸಲಿದ್ದಾರೆ ಎಂದು ಬಿಜೆಪಿಯಿಂದ ವಿಷಯ ಮುಟ್ಟಿದೆ. ’ಲೋಕಪಾಲ್‌ ಅನುಷ್ಠಾನಕ್ಕೆ ಯಾವುದೇ ಕ್ರಮ ಕೈಗೊಳ್ಳದೆ, ಇಲ್ಲಿ ಬಂದು ನನ್ನನ್ನು ಭೇಟಿ ಮಾಡುವುದರಿಂದ ಪ್ರಯೋಜನವೇನು? ಜನರಿಗೆ ಇದು ತಪ್ಪು ಸಂದೇಶವನ್ನು ತಲುಪಿಸುತ್ತದೆ ಅಷ್ಟೇ. ಮೊದಲ ಲೋಕಪಾಲ್ ಪ್ರಕ್ರಿಯೆ ಪೂರ್ಣಗೊಳಿಸಲು ತಿಳಿಸಿರುವೆ’ ಎಂದು ಅಣ್ಣಾ ಹೇಳಿದ್ದಾರೆ.

ಭೇಟಿಯಾಗಲು ಇಚ್ಛಿಸಿದ್ದ ಕೇಂದ್ರ ಸಚಿವರ ಹೆಸರನ್ನು ಪ್ರಸ್ತಾಪಿಸದ ಅಣ್ಣಾ ಹಜಾರೆ, ಉಪವಾಸ ಮುಂದುವರಿಸಲು ನಿಶ್ಚಯಿಸಿದ್ದಾರೆ.

ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಲೋಕಪಾಲ್‌ ಮತ್ತು ಲೋಕಾಯುಕ್ತ ಆಂದೋಲದ ಸಂದರ್ಭದಲ್ಲಿ ಇಡೀ ದೇಶದ ಜನರು ಹೋರಾಟದಲ್ಲಿ ಭಾಗಿಯಾದರು. ಈ ಕಿಚ್ಚಿನ ಕಾರಣದಿಂದಾಗಿ ನೀವು ಅಧಿಕಾರಕ್ಕೆ ಬಂದಿರಿ, ಈಗ ಹೋರಾಟವನ್ನು ದೂರುತ್ತಿರುವಿರಿ. ಅರುಣ್‌ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್‌ರಂತಹ ನಾಯಕರು 2013ರ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಲೋಕಪಾಲ್‌ ಪರವಾಗಿ ಮಾತನಾಡಿದ್ದರು. ಈಗ ಲೋಕಪಾಲ್‌ ಬಗ್ಗೆ ಅಲರ್ಜಿ ಬೆಳೆಸಿಕೊಂಡಿದ್ದಾರೆ ಎಂದು ಅಣ್ಣಾ ಹಜಾರೆ ಆಕ್ರೋಶ ಹೊರ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.