ADVERTISEMENT

ವಾಗ್ದಾನ ಈಡೇರಿಸುವಲ್ಲಿ ಬಿಜೆಪಿ ವಿಫಲ: ಮೋದಿ, ಶಾ ವಿರುದ್ಧ ಖರ್ಗೆ ವಾಗ್ದಾಳಿ

ಪಿಟಿಐ
Published 7 ನವೆಂಬರ್ 2025, 15:48 IST
Last Updated 7 ನವೆಂಬರ್ 2025, 15:48 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಸಾಸರಾಮ್‌ (ಬಿಹಾರ): ಬಿಹಾರ ಜನರಿಗೆ ನೀಡಿದ್ದ ವಾಗ್ದಾನವನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಆದರೆ ‘ಇಂಡಿಯಾ’ ಒಕ್ಕೂಟವು ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಹೇಳಿದರು.

ಚೆನಾರಿಯಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಅವರು ಸುಳ್ಳು ಹೇಳಲು ಹಿಂದೆ ಸರಿಯುವುದಿಲ್ಲ. ಅವರ ಸ್ನೇಹಿತ ಅಮಿತ್‌ ಶಾ ಕೂಡ ಅವರಂತೆಯೇ’ ಎಂದರು.

ಪ್ರತಿ ವರ್ಷ ರೈತರಿಗೆ ₹2 ಕೋಟಿ ನೀಡುವುದಾಗಿ ಮೋದಿ ಅವರು ಹೇಳಿದ್ದರು. ಅವರು ಹಣ ನೀಡಿದರೇ? ಇಲ್ಲ. ಬಡವರಿಗೆ ಒಂದು ಕೋಟಿ ಮನೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಅದನ್ನೂ ಈಡೇರಿಸಲಿಲ್ಲ ಎಂದು ಆರೋಪಿಸಿದರು.

ADVERTISEMENT

ನೆಹರೂ ಅವರು ಈ ದೇಶಕ್ಕೆ ಎಚ್‌ಎಂಟಿ, ಬಿಎಚ್‌ಇಎಲ್‌ ಮುಂತಾದ ಸಂಸ್ಥೆಗಳನ್ನು ನೀಡಿದ್ದಾರೆ. ಆದರೆ, ಬಿಜೆಪಿಯು ಆರ್‌ಎಸ್‌ಎಸ್‌ ಸೇನಾಪಡೆಯನ್ನು ಸ್ಥಾಪಿಸಿದೆ. ಅದು ಮನುಸ್ಮೃತಿಯ ಆಧಾರದಲ್ಲಿ ದೇಶ ನಡೆಸಲು ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದರು.

‘ಬಿಹಾರ ಜನರಿಂದ ಎನ್‌ಡಿಎ ನಿರಾಕರಣೆ’

ಬಿಹಾರದ ಆಡಳಿತ ವ್ಯವಸ್ಥೆಯು ‘ರಿಮೋಟ್‌ ನಿಯಂತ್ರಣ’ದಲ್ಲಿರುವುದು ರಾಜ್ಯ ಜನರಿಗೆ ತಿಳಿದಿದೆ. ಹೀಗಾಗಿ ಅವರು ಎನ್‌ಡಿಎಯನ್ನು ನಿರಾಕರಿಸಲಿದ್ದಾರೆ ಎಂದು ಕಾಂಗ್ರೆಸ್‌ ಶುಕ್ರವಾರ ಹೇಳಿದೆ. 

‘ಬಿಹಾರದಲ್ಲಿ ಅದಾನಿ ಸಮೂಹಕ್ಕೆ ಕೆಂಪು ಹಾಸಿನ ಸ್ವಾಗತ ಲಭಿಸುತ್ತದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲಿದೆ’ ಎಂದು ಕೆ.ಸಿ ವೇಣುಗೋಪಾಲ್‌ ಅವರು ‘ಎಕ್ಸ್‌’ನಲ್ಲಿ ಹೇಳಿದರು.

‘ಆರ್‌.ಕೆ.ಸಿಂಗ್‌ ಅವರು 2017ರಿಂದ 2024ರವರೆಗೆ ಕೇಂದ್ರ ಇಂಧನ ಸಚಿವರಾಗಿದ್ದರು. ಅವರು ಬಿಹಾರದಲ್ಲಿ ನಡೆದ ₹60000 ಕೋಟಿ ಹಗರಣವನ್ನು ಬಯಲಿಗೆಳೆದಿದ್ದಾರೆ. ಪ್ರಧಾನಿ ಅವರು ಬಿಹಾರದಲ್ಲಿ ಅದಾನಿ ಸಮೂಹಕ್ಕೆ ಕೆಂಪು ಹಾಸಿನ ಸ್ವಾಗತ ನೀಡಿದ್ದರಿಂದ ಈ ಹಗರಣ ನಡೆದಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.