ADVERTISEMENT

ನಿರ್ಮಲಾ ಸೀತಾರಾಮನ್ 'ಸಹಿ ನಕಲು' ಆರೋಪ: ಮುರಳೀಧರ್ ರಾವ್ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 13:37 IST
Last Updated 27 ಮಾರ್ಚ್ 2019, 13:37 IST
ಮುರಳೀಧರ್ ರಾವ್
ಮುರಳೀಧರ್ ರಾವ್    

ಹೈದರಾಬಾದ್:ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿಯನ್ನು ನಕಲಿಸಿ ₹2.17 ಕೋಟಿ ಹಣ ಸಂಗ್ರಹಿಸಿದ ಆರೋಪದಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ಮತ್ತು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಸರೂನ್‍ನಗರ್ ಪೊಲೀಸ್ ಠಾಣೆಯಲ್ಲಿ ಮುರಳೀಧರ್ ರಾವ್ ವಿರುದ್ಧ ಪ್ರಕರಣ ದಾಖಲಾಗಿದೆ.ತನ್ನ ಪತಿಗೆ ಕೇಂದ್ರ ಸರ್ಕಾರದ ಕೆಲಸ ನೀಡುವುದಾಗಿ ಹೇಳಿ ಇವರು ಹಣ ಪಡೆದಿದ್ದರು ಎಂದ ಮಹಿಳೆಯೊಬ್ಬರ ದೂರಿನ ಪ್ರಕಾರ ಮುರಳೀಧರ್ ರಾವ್ ಮತ್ತು ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭರವಸೆ ನೀಡಿದಂತೆ ಅವರು ಕೆಲಸ ನೀಡಲಿಲ್ಲ, ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದು ಮಹಿಳೆ ದೂರಿದ್ದಾರೆ.

ತಲ್ಲಾ ಪ್ರವರ್ಣ ರೆಡ್ಡಿ ಎಂಬಾಕೆಯ ದೂರಿನ ಪ್ರಕಾರ, ತನ್ನ ಸಂಬಂಧಿಯಾದ ಈಶ್ವರ್ ರೆಡ್ಡಿ ಎಂಬವರು ಬಿಜೆಪಿ ನೇತಾರ ಮುರಳೀಧರ್ ರಾವ್ ಮತ್ತು ಕೃಷ್ಣ ಕಿಶೋರ್ ಅವರ ಪರಮಾಪ್ತರಾಗಿದ್ದರು. ಕೇಂದ್ರ ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ರೆಡ್ಡಿ ಹೇಳಿದ್ದರು.

ADVERTISEMENT

ಪ್ರವರ್ಣ ರೆಡ್ಡಿ ಮತ್ತು ಆಕೆಯ ಗಂಡ ಮಹಿಪಾಲ್ ರೆಡ್ಡಿ ಅವರನ್ನು ಪುಸಲಾಯಿಸಿದ ಈಶ್ವರ್ ರೆಡ್ಡಿ, ವಾಣಿಜ್ಯ ಮತ್ತು ಉದ್ಯಮ ಸಚಿವಾಲಯದಡಿಯಲ್ಲಿರುವ ಫಾರ್ಮಾ ಎಕ್ಸಿಲ್‌ನ ಸದಸ್ಯತ್ವಕ್ಕಾಗಿ ಹಣ ಪಾವತಿ ಮಾಡಬೇಕೆಂದು ಹೇಳಿದ್ದರು.
ಈ ದಂಪತಿಗಳಿಗೆ ಭಾರತ ಸರ್ಕಾರದ ನೇಮಕಾತಿ ಪತ್ರದ ಪ್ರತಿಯನ್ನೂ ತೋರಿಸಲಾಗಿತ್ತು. ಇದಾದ ನಂತರ ಕೇಂದ್ರ ರಕ್ಷಣಾ ಸಚಿವರ ಸಹಿ ಇರುವ ಪತ್ರವೊಂದನ್ನು ತೋರಿಸಿ ₹2.17 ಕೋಟಿ ಪಡೆದಿದ್ದರು.ಮಹಿಪಾಲ್ ರೆಡ್ಡಿಯನ್ನು ಫಾರ್ಮಾ ಎಕ್ಸಿಲ್‍ನ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದರು.

ಆದಾಗ್ಯೂ, ಆರೋಪಿಗಳು ನೌಕರಿನೀಡುವ ಕಾರ್ಯ ವಿಳಂಬ ಮಾಡಿದಾಗ, ಈ ದಂಪತಿಗಳು ಹಣ ವಾಪಸ್ ಕೇಳಿದ್ದಾರೆ. ಆಗ ಮುರಳೀಧರ್ ರಾವ್ ಈ ದಂಪತಿಗಳಿಗೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.ಆನಂತರ ಹಣ ವಾಪಸ್ ನೀಡುವುದಾಗಿ ಅವರೇ ಬಂದು ಹೇಳಿದ್ದರು. ಆಗ ಅವರು ಸಹಿ ಹಾಕಿದ ಚೆಕ್ ನೀಡಿದ್ದರೂ, ಹಣ ವಾಪಸ್ ಸಿಗಲಿಲ್ಲ.

ದೆಹಲಿ ಸೈಬರ್ ಕ್ರೈಮ್ ವಿಭಾಗ ತಾನಾಗಿಯೇ ಪ್ರಕರಣ ದಾಖಲಿಸಿ ದೂರುದಾರರ ಹೇಳಿಕೆಯನ್ನು 2016ರಲ್ಲಿ ದಾಖಲಿಸಿಕೊಂಡಿತ್ತು. ಇದೀಗ ಈ ದಂಪತಿಗಳು ರಂಗ ರೆಡ್ಡಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.