ಸಂಜಯ್ ರಾವುತ್
ಮುಂಬೈ: ಏಕನಾಥ ಶಿಂದೆ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲೇಬೇಕಿತ್ತು. ಶಿಂದೆ ಅವರು ಮೊಂಡುತನ ಮುಂದುವರಿಸಿದ್ದರೆ ಅವರು ಇಲ್ಲದೆಯೇ ಪ್ರಮಾಣ ವಚನ ಕಾರ್ಯಕ್ರಮ ನಡೆಸಲು ಬಿಜೆಪಿಯ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿತ್ತು ಎಂದು ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್ ಶುಕ್ರವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಹುಮತ ಪಡೆದಿದ್ದರೂ ರಾಜ್ಯ ಸರ್ಕಾರದಲ್ಲಿ ಸಂಪುಟ ರಚನೆ ಪೂರ್ಣಗೊಂಡಿಲ್ಲ. ‘ಮಹಾಯುತಿ’ಯ ಒಳಗೆ ಏನೋ ಸರಿ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಬಿಜೆಪಿಯು ಸರ್ಕಾರ ರಚನೆಗೆ 15 ದಿನ ತೆಗೆದುಕೊಂಡಿದೆ’ ಎಂದರು.
ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರು ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಏಕನಾಥ ಶಿಂದೆ ಮತ್ತು ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿದರು.
ದಕ್ಷಿಣ ಮುಂಬೈನ ವಿಶಾಲವಾದ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಉಪ ಮುಖ್ಯಮಂತ್ರಿಯಾಗಿ ಸಂಪುಟ ಸೇರುವಂತೆ ಶಿಂದೆ ಅವರಿಗೆ ಬಿಜೆಪಿ ಮತ್ತು ಶಿವಸೇನಾ ಶಾಸಕರು ಒತ್ತಾಯ ಮಾಡಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.