ADVERTISEMENT

ಸರ್ಕಾರ ಉರುಳಿಸಲು ಶಾಸಕರಿಗೆ ಬಿಜೆಪಿ ₹30 ಕೋಟಿ ಆಮಿಷ: ದಿಗ್ವಿಜಯ್, ಕಮಲನಾಥ್ ಆರೋಪ

ಮಧ್ಯ ಪ್ರದೇಶ ರಾಜಕೀಯ

ಏಜೆನ್ಸೀಸ್
Published 4 ಮಾರ್ಚ್ 2020, 5:04 IST
Last Updated 4 ಮಾರ್ಚ್ 2020, 5:04 IST
ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಮತ್ತು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (ಸಂಗ್ರಹ ಚಿತ್ರ)
ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಮತ್ತು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (ಸಂಗ್ರಹ ಚಿತ್ರ)   

ಭೋಪಾಲ್: ಮಧ್ಯ ಪ್ರದೇಶ ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿಯು ಆಡಳಿತಾರೂಢ ಪಕ್ಷದ ಶಾಸಕರಿಗೆ ₹25–30 ಕೋಟಿ ಆಮಿಷವೊಡ್ಡಿದೆ ಎಂದು ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

‘ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ನರೋತ್ತಮ್ ಮಿಶ್ರಾ ಆಡಲಿತಾರೂಢ ಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಅವರು (ಬಿಜೆಪಿಯವರು) ಈಗ ₹5 ಕೋಟಿ ಕೊಡಲು ಮುಂದೆ ಬಂದಿದ್ದಾರೆ. ಎರಡನೇ ಹಂತದ ಹಣವನ್ನು ರಾಜ್ಯಸಭೆ ಚುನಾವಣೆ ವೇಳೆ ನೀಡುವುದಾಗಿ ಹೇಳಿದ್ದಾರೆ. ಬಾಕಿ ಉಳಿದ ಹಣವನ್ನು ಅವಿಶ್ವಾಸ ನಿರ್ಣಯದ ವೇಳೆ ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ನೆರವಾದರೆ ನೀಡುವುದಾಗಿ ಹೇಳಿದ್ದಾರೆ’ ಎಂದು ದಿಗ್ವಿಜಯ್ ಆರೋಪಿಸಿದ್ದಾರೆ.

ADVERTISEMENT

ದಿಗ್ವಿಜಯ್ ಸಿಂಗ್ ಮಾಡಿರುವ ಆರೋಪ ನಿಜ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಸಹ ಹೇಳಿದ್ದಾರೆ.

ರಾಜ್ಯಸಭೆಗೆ ಮಧ್ಯ ಪ್ರದೇಶದಿಂದ ಮೂವರು ಸದಸ್ಯರ ಆಯ್ಕೆಗಾಗಿ ಮಾರ್ಚ್ 26ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡಿದೆ ಎಂದು ಕಮಲನಾಥ್ ದೂರಿದ್ದಾರೆ.

‘ಬಿಜೆಪಿಯು ಹಣದ ಆಮಿಷವೊಡ್ಡುತ್ತಿದೆ ಎಂದು ಅನೇಕ ಶಾಸಕರು ನನ್ನ ಬಳಿ ಹೇಳಿದ್ದಾರೆ. 15 ವರ್ಷಗಳ ಆಡಳಿತದ ವೇಳೆ ಮಾಡಿದ್ದ ಅಕ್ರಮಗಳು ಈಗ ಬಯಲಾಗಬಹುದು ಎಂಬ ಆತಂಕ ಬಿಜೆಪಿಯವರಲ್ಲಿದೆ. ಹೀಗಾಗಿ ಅವರು ಸರ್ಕಾರ ಪತನಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಮತ್ತು ಆ ಪಕ್ಷಕ್ಕೆ ಬೆಂಬಲ ನೀಡಿರುವ 8 ಶಾಸಕರನ್ನು ಹರಿಯಾಣದ ಗುರುಗ್ರಾಮದಲ್ಲಿರುವ ಐಟಿಸಿ ರೆಸಾರ್ಟ್‌ನಲ್ಲಿ ಬಿಜೆಪಿ ಬಲವಂತವಾಗಿ ಹಿಡಿದಿಟ್ಟುಕೊಂಡಿರುವುದು ಮಂಗಳವಾರ ತಡರಾತ್ರಿ ಬಯಲಾಗಿತ್ತು. ಈ ಪೈಕಿ ಒಬ್ಬ ಶಾಸಕಿಯನ್ನು ಮರಳಿ ಕರೆಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎನ್ನಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.