ADVERTISEMENT

ಲಸಿಕೆಯ ಬದಲು ಜಾಹೀರಾತು ನೀಡುವುದರಲ್ಲಿ ವ್ಯಸ್ತವಾಗಿರುವ ಎಎಪಿ ಸರ್ಕಾರ: ಬಿಜೆಪಿ

ಪಿಟಿಐ
Published 10 ಮೇ 2021, 13:43 IST
Last Updated 10 ಮೇ 2021, 13:43 IST
ಅರವಿಂದ ಕೇಜ್ರಿವಾಲ್ ಮತ್ತು ಸಂಬಿತ್ ಪಾತ್ರ – ಚಿತ್ರ ಕೃಪೆ: ಪಿಟಿಐ & ಬಿಜೆಪಿ ಟ್ವಿಟರ್ ಖಾತೆ
ಅರವಿಂದ ಕೇಜ್ರಿವಾಲ್ ಮತ್ತು ಸಂಬಿತ್ ಪಾತ್ರ – ಚಿತ್ರ ಕೃಪೆ: ಪಿಟಿಐ & ಬಿಜೆಪಿ ಟ್ವಿಟರ್ ಖಾತೆ   

ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕೋಟ್ಯಂತರ ರೂಪಾಯಿಯನ್ನು ಪ್ರಚಾರಕ್ಕಾಗಿ ಖರ್ಚು ಮಾಡುವಲ್ಲಿ ವ್ಯಸ್ತವಾಗಿದೆ. ಕೋವಿಡ್ ಬಿಕ್ಕಟ್ಟಿನ ನಿರ್ವಹಣೆ ಹೊಣೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಬೊಟ್ಟು ಮಾಡುತ್ತಾ ಕೈತೊಳೆದುಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ವರ್ಚುವಲ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಎಎಪಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳನ್ನು ಉಲ್ಲೇಖಿಸಿದ ಅವರು, ಕೇಜ್ರಿವಾಲ್ ಸರ್ಕಾರ 2015ರಿಂದೀಚೆಗೆ ಸುಮಾರು ₹805 ಕೋಟಿ ಮೊತ್ತವನ್ನು ಜಾಹೀರಾತಿಗಾಗಿ ವ್ಯಯಿಸಿದೆ. ಆದರೆ, ಒಂದೇ ಒಂದು ಆಸ್ಪತ್ರೆಯನ್ನು ನಗರದಲ್ಲಿ ಆರಂಭಿಸಿಲ್ಲ.

ಅವರು ಪ್ರತಿ ದಿನ ಟಿವಿಯಲ್ಲಿ ಬಂದು ಸುಳ್ಳು ಹೇಳಿ ಜನರನ್ನು ಹಾದಿತಪ್ಪಿಸುತ್ತಿದ್ದಾರೆ ಎಂದು ಪಾತ್ರಾ ದೂರಿದ್ದಾರೆ.

‘ನೀವು ಜಾಹೀರಾತು ನೀಡುತ್ತಾ ಲಾಕ್‌ಡೌನ್ ಇಲ್ಲ, ಆಮ್ಲಜನಕದ ಕೊರತೆ ಇಲ್ಲ, ಆಮ್ಲಜನಕವನ್ನು ಮನೆಗಳಿಗೆ ತಲುಪಿಸಲಾಗುತ್ತಿದೆ ಎಂದು ಹೇಳುತ್ತಾ ಇರಿ. ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದಾಗ ಕೇಂದ್ರದತ್ತ ಕೈತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತೀರಿ’ ಎಂದು ಎಂದು ಎಎಪಿ ನಾಯಕರನ್ನು ಉದ್ದೇಶಿಸಿ ಸಂಬಿತ್ ಪಾತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 26ರಂದು ಕೇಜ್ರಿವಾಲ್ ತಮ್ಮ ಸರ್ಕಾರ 1.34 ಕೋಟಿ ಜನರಿಗೆ ಲಸಿಕೆ ನೀಡಲು ಆದೇಶಿಸುವುದಾಗಿ ತಿಳಿಸಿದ್ದರು. ಇದು ಸುಮಾರು ₹1,400 ಕೋಟಿ ಮೊತ್ತದ್ದಾಗಿದೆ. ಆದರೆ, ಇಂದು ಅವರು ಏನೂ ಇಲ್ಲ ಎನ್ನುತ್ತಿದ್ದಾರೆ. 45 ವರ್ಷ ಮೇಲ್ಪಟ್ಟ ಶೇ 8.93ರಷ್ಟು ಜನರಿಗೆ ಮಾತ್ರ ದೆಹಲಿಯಲ್ಲಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರಲ್ಲಿ ಕೇವಲ ಶೇ 48.03 ಮಂದಿ ಮಾತ್ರ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ ಶೇ 17 ಮಂದಿಗೆ ಮಾತ್ರ ಎರಡನೇ ಡೋಸ್ ಲಸಿಕೆ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಲಸಿಕಾ ಅಭಿಯಾನವನ್ನು ತ್ವರಿತಗೊಳಿಸುವ ಬದಲು ಎಎಪಿ ಸರ್ಕಾರ ಜಾಹೀರಾತು ನೀಡುವಲ್ಲಿ ವ್ಯಸ್ತವಾಗಿದೆ. ಜತೆಗೆ ಈಗ ಆಮ್ಲಜನಕ ಲಭ್ಯತೆ ವಿಚಾರವಾಗಿ ರಾಜಕೀಯ ಮಾಡುತ್ತಿದೆ ಎಂದು ಪಾತ್ರಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.