ADVERTISEMENT

ಗುಜರಾತ್‌ನಲ್ಲಿ ಪ್ರಚಾರಕ್ಕಾಗಿ ಹಣ ವ್ಯರ್ಥ ಮಾಡದೆ ಅಭಿವೃದ್ಧಿ: ಪ್ರಧಾನಿ ಮೋದಿ

ಪಿಟಿಐ
Published 29 ಸೆಪ್ಟೆಂಬರ್ 2022, 13:13 IST
Last Updated 29 ಸೆಪ್ಟೆಂಬರ್ 2022, 13:13 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಭಾವ್‌ನಗರ: ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವು ಪ್ರಚಾರಕ್ಕಾಗಿ ಹಣ ವ್ಯರ್ಥ ಮಾಡದೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉಲ್ಲೇಖ ಮಾಡಿದ್ದಾರೆ.

ಸೌರಾಷ್ಟ್ರ ಪ್ರದೇಶದ ಭಾವ್‌ನಗರದಲ್ಲಿ ₹6,000 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸೌರಾಷ್ಟ್ರ ನರ್ಮದಾ ಅವತರಣ ನೀರಾವರಿ (ಎಸ್‌ಎಯುಎನ್‌ಐ) ಯೋಜನೆ ಜಾರಿಗೊಳಿಸುವ ಮೂಲಕ ಟೀಕಾಕಾರರ ಆರೋಪ ತಪ್ಪು ಎಂಬುದನ್ನು ಸಾಬೀತು ಮಾಡಿದ್ದೇವೆ ಎಂದು ಹೇಳಿದ್ದಾರೆ.

ನಾವು ಪ್ರಚಾರಕ್ಕಾಗಿ ಹಣ ವ್ಯರ್ಥ ಮಾಡದೆ ಜನಪರ ಕೆಲಸ ಮಾಡಿದ್ದೇವೆ. ಜನರ ಸೇವೆಯೇ ನಮ್ಮ ಸರ್ಕಾರದ ಧ್ಯೇಯ ಎಂದು ಹೇಳಿದರು.

ಈ ಯೋಜನೆ ಚುನಾವಣಾ ಕೇಂದ್ರಿತ ಘೋಷಣೆ ಎಂದು ಬಿಂಬಿಸಿದವರು ತಪ್ಪು ಎಂಬುದನ್ನು ಸಾಬೀತು ಮಾಡಿದ್ದೇವೆ. ನಾವು ನೀಡಿದ ಭರವಸೆಗಳಿಗೆ ಬದ್ಧರಾಗಿದ್ದೇವೆ. ಸಮಾಜ ಕಲ್ಯಾಣಕ್ಕಾಗಿ ನಮ್ಮ ಪಕ್ಷವಿದೆ ಎಂದು ಹೇಳಿದರು.

ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ಪ್ರಾರಂಭಿಸಲಾಗಿತ್ತು. ಈ ಯೋಜನೆ ಮೂಲಕ ನರ್ಮದಾ ನದಿಗೆ ಅಡ್ಡಲಾಗಿ ಸರ್ದಾರ್ ಸರೋವರ ಅಣೆಕಟ್ಟಿನಿಂದ ತುಂಬಿ ಹರಿಯುವ ಪ್ರವಾಹದ ನೀರನ್ನು ಬರಪೀಡಿತ ಪ್ರದೇಶಗಳಿಗೆ ತಿರುಗಿಸುವ ಮೂಲಕ 115 ಪ್ರಮುಖ ಅಣೆಕಟ್ಟುಗಳನ್ನು ತುಂಬುವ ಗುರಿ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.