ADVERTISEMENT

ಉತ್ತರಪ್ರದೇಶ ವಿಧಾನಸಭೆ ಚುನಾವಣಾ ಪ್ರಚಾರದಿಂದ ಮಿಶ್ರಾ ಅವರನ್ನು ಹೊರಗಿಟ್ಟ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 20:59 IST
Last Updated 17 ಡಿಸೆಂಬರ್ 2021, 20:59 IST
ಅಜಯ್‌ ಮಿಶ್ರಾ
ಅಜಯ್‌ ಮಿಶ್ರಾ   

ಲಖನೌ: ವಿ‍ಪಕ್ಷಗಳುರಾಜೀನಾಮೆಗೆ ಆಗ್ರಹಿಸುತ್ತಿದ್ದರೂ ಸಚಿವ ಸ್ಥಾನದಲ್ಲಿ ಮುಂದುವರಿದಿರುವ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಬಿಜೆಪಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಪ್ರಚಾರದಿಂದ ಹೊರಗಿಟ್ಟಿದೆ.

ಲಖಿಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆ ಪ್ರಕರಣದಲ್ಲಿ ಅವರ ಮಗ ಆರೋಪಿಯಾಗಿರುವ ಕಾರಣ ಅವರು ವಿಪಕ್ಷಗಳಿಂದ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಮಿಶ್ರಾ ಹೊರತುಪಡಿಸಿ ಉತ್ತರ ಪ್ರದೇಶದಿಂದ ಆಯ್ಕೆ ಆಗಿರುವ ಕೇಂದ್ರ ಸಂಪುಟದ ಇತರ ಸಚಿವರು ಚುನಾವಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಕಳೆದ ತಿಂಗಳು ಲಖನೌನಲ್ಲಿ ನಡೆದಿದ್ದ ಅಖಿಲ ಭಾರತ ಪೊಲೀಸ್‌ ಮಹಾನಿರ್ದೇಶಕರ ಸಮಾವೇಶ ಉದ್ಘಾಟನೆ ವೇಳೆ ಮಿಶ್ರಾ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಆದರೆ, ಚುನಾವಣೆಗೆ ಸಂಬಂಧಿಸಿದ ತಂತ್ರಗಾರಿಕೆ ರೂಪಿಸಲು ಆಯೋಜಿಸಲಾಗುವ ಸಭೆಗಳಿಗೆ ರಾಜ್ಯ ಬಿಜೆಪಿ, ಅವರಿಗೆ ಆಮಂತ್ರಣ ನೀಡುತ್ತಿಲ್ಲ. ಮಿಶ್ರಾ ಅವರ ಲೋಕಸಭೆ ಕ್ಷೇತ್ರ ಲಖಿಂಪುರ ಖೇರಿ ಪಕ್ಕದ ಜಿಲ್ಲೆ ಶಾಜಹಾನ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಮಿಶ್ರಾ ಪಾಲ್ಗೊಳ್ಳುವ ಕುರಿತು ಖಚಿತ ಮಾಹಿತಿ ಇಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಲಖಿಂಪುರಖೇರಿ ಹಿಂಸಾಚಾರದಲ್ಲಿ ಮಿಶ್ರಾ ಅವರ ಮಗನ ಪಾತ್ರ ಇರುವುರಿಂದ ಅವರ ಜೊತೆ ಪ್ರಧಾನಿ ಮೋದಿ ವೇದಿಕೆ ಹಂಚಿಕೊಳ್ಳಬಾರದು ಎಂದು ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ನಾಯಕರು ಆಗ್ರಹಿಸಿದ್ದಾರೆ.

ADVERTISEMENT

‘ನಮಗೆ ಯಾವುದೇ ವಿವಾದ ಬೇಡ. ಮಿಶ್ರಾ ಅವರನ್ನು ಚುನಾವಣಾ ಪ್ರಚಾರದಲ್ಲಿ ಸೇರಿಸಿಕೊಳ್ಳುವುದರಿಂದ ವಿಪಕ್ಷಗಳು ಮತ್ತು ಇತರರಿಂದ ಟೀಕೆ ವ್ಯಕ್ತವಾಗುತ್ತವೆ’ ಎಂದು ಉತ್ತರ ಪ್ರದೇಶ ಬಿಜೆಪಿ ಹಿರಿಯ ಮುಖಂಡರೊಬ್ಬರು ಪ್ರಜಾವಾಣಿಗೆ ಹೇಳಿದ್ದಾರೆ.

ಮಿಶ್ರಾ ಅವರನ್ನು ಮಾಧ್ಯಮಗಳು ಮುಜುಗರಕ್ಕೀಡು ಮಾಡುವುದು ನಮಗೆ ಬೇಕಿಲ್ಲ. ವಿಶೇಷವಾಗಿ, ಲಖಿಂಪುರ ಖೇರಿ ಘಟನೆ ಸಂಬಂಧಿಸಿದಂತೆ ಎಸ್‌ಐಟಿ ನೀಡಿರುವ ವರದಿ ಕುರಿತು ವರದಿಗಾರರೊಬ್ಬರು ಪ್ರಶ್ನಿಸಿದ ವೇಳೆ ಮಿಶ್ರಾ ಅವರು ವರದಿಗಾರರ ಜೊತೆ ಆಕ್ಷೇಪಾರ್ಹ ರೀತಿಯಲ್ಲಿ ನಡೆದುಕೊಂಡಿದ್ದರು.

ಬಿಜೆಪಿ–ಅಮರಿಂದರ್ ಮೈತ್ರಿ ಅಂತಿಮ
ನವದೆಹಲಿ:ಕಾಂಗ್ರೆಸ್ ತೊರೆದು ಸ್ವತಂತ್ರ ಪಕ್ಷ ಸ್ಥಾಪಿಸಿರುವ‍ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್ ಸಿಂಗ್ ಅವರು, ರಾಜ್ಯದ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪಂಜಾಬ್ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್ ಶೆಖಾವತ್ ಅವರ ಜತೆ ನಡೆಸಿದ ಮಾತುಕತೆಯಲ್ಲಿ, ಬಿಜೆಪಿ ಮತ್ತು ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್‌ನ ಮೈತ್ರಿಯನ್ನು ಅಂತಿಮಗೊಳಿಸಲಾಗಿದೆ.

ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್‌ ತೊರೆದಾಗಲೇ ಬಿಜೆಪಿ ಸೇರುತ್ತಾರೆ ಅಥವಾ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಪಕ್ಷವನ್ನು ಸ್ಥಾಪಿಸಿದ್ದರು. ಜತೆಗೆ, ‘ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದರೆ ಮಾತ್ರ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.