ADVERTISEMENT

ವಸುಂಧರಾ ರಾಜೆ ಬೆಂಬಲ ಸಿಗದೆ 2020ರ ಬಂಡಾಯದ ಪಿತೂರಿ ವಿಫಲ: ಅಶೋಕ್ ಗೆಹಲೋತ್‌

ಪಿಟಿಐ
Published 8 ಮೇ 2023, 4:12 IST
Last Updated 8 ಮೇ 2023, 4:12 IST
ಅಶೋಕ್ ಗೆಹಲೋತ್‌ (ಪಿಟಿಐ ಸಂಗ್ರಹ ಚಿತ್ರ)
ಅಶೋಕ್ ಗೆಹಲೋತ್‌ (ಪಿಟಿಐ ಸಂಗ್ರಹ ಚಿತ್ರ)   

ಧೋಲ್ಪುರ್ : ‘ಹಣ ಬಲದ ಮೂಲಕ ಚುನಾಯಿತ ಸರ್ಕಾರವನ್ನು ಉರುಳಿಸುವ ಪಿತೂರಿಯನ್ನು ಬಿಜೆಪಿ ನಾಯಕಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ನಾಯಕ ಕೈಲಾಶ್ ಮೇಘವಾಲ್ ಅವರು ಬೆಂಬಲಿಸಲು ನಿರಾಕರಿಸಿದ ಕಾರಣ 2020ರ ಕಾಂಗ್ರೆಸ್ ನಾಯಕರ ಬಂಡಾಯ ವಿಫಲವಾಗಿದೆ‘ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹೇಳಿದರು.

ಜುಲೈ 2020ರಲ್ಲಿ ಆಗಿನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿದಂತೆ 18 ಕಾಂಗ್ರೆಸ್ ಶಾಸಕರು ಅಶೋಕ್‌ ಗೆಹಲೋತ್‌ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು. ಹೈಕಮಾಂಡ್‌ ಮಧ್ಯಸ್ಥಿತಿಕೆ ನಂತರ ಬಂಡಾಯ ಶಮನಗೊಂಡಿತ್ತು. ಘಟನೆ ಬಳಿಕ ಉಪಮುಖ್ಯಮಂತ್ರಿ ಸ್ಥಾನದಿಂದ ಸಚಿನ್‌ ಪೈಲಟ್‌ ಅವರನ್ನು ಕೆಳಗಿಳಿಸಲಾಗಿತ್ತು.

ಈ ಕುರಿತು ಧೋಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ್‌ ಗೆಹಲೋತ್‌, ‘ಹಿಂದೆ ಭೈರೋನ್ ಸಿಂಗ್ ಶೇಖಾವತ್ ನೇತೃತ್ವದ ಬಿಜೆಪಿ ಸರ್ಕಾರ ಪತನಗೊಳಿಸುವ ಪಿತೂರಿಗೆ ನಾನು ಬೆಂಬಲಿಸಿರಲಿಲ್ಲ. ಅದು ಅನ್ಯಾಯವೆಂದು ನಾನು ಭಾವಿಸಿದ್ದೆ. ಅದೇ ರೀತಿ ಬಿಜೆಪಿಯ ವಸುಂಧರ ರಾಜೆ ಮತ್ತು ಕೈಲಾಶ್‌ ಮೇಘವಾಲ್ ನಡೆದುಕೊಂಡಿದ್ದಾರೆ. 2020ರ ಬಂಡಾಯದ ಸಮಯದಲ್ಲಿ ನನ್ನ ನೇತೃತ್ವದ ಸರ್ಕಾರ ಉರುಳಿಸುವ ಪಿತೂರಿಗೆ ಬೆಂಬಲಿಸಲು ಅವರು ನಿರಾಕರಿಸಿದ್ದರು‘ ಎಂದು ಹೇಳಿದರು.

ADVERTISEMENT

‘ಹಣ ಬಲದ ಮೇಲೆ ಚುನಾಯಿತ ಸರ್ಕಾರವನ್ನು ಉರುಳಿಸುವ ಸಂಪ್ರದಾಯ ನಮ್ಮಲ್ಲಿಲ್ಲ. ಸರ್ಕಾರವನ್ನು ಉರುಳಿಸಲು ಅವರು(ಅಶೋಕ್‌ ಗೆಹಲೋತ್‌) ಮಾಡಿದ ತಪ್ಪೇನು? ಎಂದು ಕೈಲಾಶ್ ಮೇಘವಾಲ್ ಮತ್ತು ವಸುಂಧರಾ ರಾಜೆ ‌ಕೇಳಿದ್ದರು‘ ಎಂದು ಅಶೋಕ್‌ ಗೆಹಲೋತ್‌ ಹೇಳಿದರು.

‘ನಾನು ಮನಸ್ಸು ಮಾಡಿದ್ದರೆ ಭೈರೋನ್ ಸಿಂಗ್ ಅವರ ಸರ್ಕಾರವನ್ನು ಉರುಳಿಸಬಹುದಿತ್ತು. ಚುನಾಯಿತ ಸರ್ಕಾರವನ್ನು ಉಳಿಸುವುದು ಅನೈತಿಕ ಎಂದು ನಾನು ಹೇಳಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಭೈರೋನ್‌ ಸಿಂಗ್‌ ಆಗ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪಕ್ಷದವರೇ ಸರ್ಕಾರವನ್ನು ಬೀಳಿಸಲು ಪಿತೂರಿ ನಡೆಸುತ್ತಿದ್ದರು. ಇದಕ್ಕೆ ನಾನು ಬೆಂಬಲಿಸಿರಲಿಲ್ಲ‘ ಎಂದು ಗೆಹಲೋತ್‌ ಹೇಳಿದರು.

‘ಕೇಂದ್ರ ಗೃಹಸಚಿವ ಅಮಿತ್ ಶಾ, ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಧರ್ಮೇಂದ್ರ ಪ್ರಧಾನ್ ಅವರು ನಮ್ಮ ಸರ್ಕಾರವನ್ನು ಉರುಳಿಸಲು ಒಟ್ಟಾಗಿ ಪಿತೂರಿ ನಡೆಸಿದ್ದರು. ಅದಕ್ಕಾಗಿ ಶಾಸಕರಿಗೆ ಹಣ ಹಂಚಿದ್ದರು. ಅದ್ಯಾಕೆ ಬಂಡಾಯವೆದ್ದ ಕಾಂಗ್ರೆಸ್ ಶಾಸಕರಿಂದ ಹಣ ವಾಪಸ್ಸು ಪಡೆಯುತ್ತಿಲ್ಲ ಎಂಬುವುದು ನನಗೆ ಆಶ್ಚರ್ಯವಾಗಿದೆ ‘ ಎಂದು ವ್ಯಂಗ್ಯ ಮಾಡಿದರು.

‘ಹಣವನ್ನು ಹಿಂತಿರುಗಿಸದ ಕಾರಣ ಶಾಸಕರು ಅಮಿತ್ ಶಾ ಅವರ ಭಯ ಸುಪರ್ದಿಯಲ್ಲಿ ಇರಬೇಕಾಗುತ್ತದೆ. ಈ ರೀತಿಯಲ್ಲಿಯೇ ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರವನ್ನು ಉರುಳಿಸಲಾಯಿತು‘ ಎಂದರು.

ಅಶೋಕ್‌ ಗೆಹಲೋತ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ‘ಗೆಹಲೋತ್‌ ಅವರ ‘ಹೊಗಳಿಕೆ‘ಗಳು ನನ್ನ ವಿರುದ್ಧದ ದೊಡ್ಡ ಪಿತೂರಿಯಾಗಿದೆ. ತಮ್ಮ ಪಕ್ಷದಲ್ಲಿನ ಬಂಡಾಯವನ್ನು ಮರೆಮಾಚಲು ಗೆಹಲೋತ್‌ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಆರೋಪ ಮಾಡುತ್ತಿದ್ದಾರೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.