ADVERTISEMENT

ಜೈಪುರ: ಮುಸ್ಲಿಂ ಪ್ರಾಬಲ್ಯ ಪ್ರದೇಶದಲ್ಲಿ ಹಿಂದೂ ರಾಷ್ಟ್ರ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 15:59 IST
Last Updated 29 ಸೆಪ್ಟೆಂಬರ್ 2024, 15:59 IST
ಜೈಪುರದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶಗಳಲ್ಲಿ ಭಾನುವಾರ ಹಿಂದೂ ರಾಷ್ಟ್ರ ರ್‍ಯಾಲಿ ನಡೆಯಿತು –ಪಿಟಿಐ ಚಿತ್ರ
ಜೈಪುರದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶಗಳಲ್ಲಿ ಭಾನುವಾರ ಹಿಂದೂ ರಾಷ್ಟ್ರ ರ್‍ಯಾಲಿ ನಡೆಯಿತು –ಪಿಟಿಐ ಚಿತ್ರ   

ಜೈಪುರ: ರಾಜಸ್ಥಾನದ ಬಿಜೆಪಿ ಶಾಸಕರೂ ಆಗಿರುವ ಸ್ವಯಂ ಘೋಷಿತ ಕೇಸರಿ ಸಂತ ಬಾಲಮುಕುಂದ ಆಚಾರ್ಯ ಅವರು ನಗರದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶದ ಮಾರ್ಗಗಳಲ್ಲಿ ಹಿಂದೂ ರಾಷ್ಟ್ರ ರ್‍ಯಾಲಿ ನಡೆಸಿದರು.

ಕೋಮು ಸೌಹಾರ್ದಕ್ಕೆ ಧಕ್ಕೆ ಬರುವುದರಿಂದ ಮತ್ತು ಸಮಾಜದಲ್ಲಿ ಬಿರುಕುಗಳು ಮೂಡುವ ಸಾಧ್ಯತೆ ಇರುವುದರಿಂದ ಈ ರ್‍ಯಾಲಿಗೆ ಅನುಮತಿ ನೀಡಬಾರದು ಎಂದು ಕೆಲ ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದ್ದರೂ, ಪೊಲೀಸರು ರ್‍ಯಾಲಿಗೆ ಅನುಮತಿ ನೀಡಿದ್ದರು.

ನಗರದ ರಾಮನವಮಿ ಮಾರ್ಗದಿಂದ ಸಾಗಿದ ಹಿಂದೂಗಳ ರ್‍ಯಾಲಿಯು ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಮಗಂಜ್‌, ಚೋಟಿ ಚೌಪರ್‌ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಾಗಿತು. ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ನೂರಾರು ಜನರು ಕೇಸರಿ ಪೇಟ ಧರಿಸಿ, ಕೇಸರಿ ಧ್ವಜ ಹಾಗೂ ರಾಷ್ಟ್ರ ಧ್ವಜಗಳನ್ನು ಹಿಡಿದು ‘ಜೈ ಶ್ರೀರಾಮ್‌’ ಘೋಷಣೆಗಳೊಂದಿಗೆ ಹೆಜ್ಜೆ ಹಾಕಿದರು. ನೂರಾರು ಜನರು ಬೈಕ್‌ಗಳಲ್ಲಿಯೂ ಸಾಗಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ಕಲ್ಪಿಸಿ, ತೀವ್ರ ನಿಗಾ ಇರಿಸಿದ್ದರು.

ADVERTISEMENT

ಉದ್ವಿಗ್ನ ಪರಿಸ್ಥಿತಿ ತಪ್ಪಿಸಲು ಪೊಲೀಸರು ಮುಸ್ಲಿಂ ಸಮುದಾಯದವರಿಗೆ ಮನೆಯೊಳಗೇ ಇರುವಂತೆ ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಭಾರತವನ್ನು ಹಿಂದೂ ಬಹುಸಂಖ್ಯಾತ ರಾಷ್ಟ್ರ ಮಾಡುವ ಕುರಿತು ಮತ್ತು ಸನಾತನ ಧರ್ಮದ ಪರ ಹೆಚ್ಚಾಗಿ ಪ್ರತಿಪಾದನೆ ಮಾಡುವ ಆಚಾರ್ಯ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹವಾ ಮಹಲ್‌ ವಿಧಾನಸಭಾ ಕ್ಷೇತ್ರದಿಂದ ಕೇವಲ 900ಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

ಹವಾ ಮಹಲ್‌ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರವಾಗಿದ್ದು, ಶೇ 42ರಷ್ಟು ಮುಸ್ಲಿಂ ಮತದಾರರಿದ್ದಾರೆ. ತಾನು ಶಾಸಕನಾಗಿ ಆಯ್ಕೆಯಾದ ಬಳಿಕ ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಆಚಾರ್ಯ ವಿವಾದ ಎಬ್ಬಿಸಿದ್ದರು. ಅಲ್ಲದೆ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ‘ಇ–ಮಿತ್ರ’ ಆಪರೇಟರ್‌ಗಳ ವಿರುದ್ಧ ಕಾನೂನುಬಾಹಿರವಾಗಿ ದಾಳಿಗಳನ್ನು ನಡೆಸಿದ್ದರು.

ಕೆಲ ದಿನಗಳ ಹಿಂದೆ, ಜೈಪುರ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ ಕೌನ್ಸಿಲರ್‌ಗಳಿಗೆ ಶುದ್ಧೀಕರಣ ಸಮಾರಂಭವನ್ನೂ ನಡೆಸಿ, ಅವರ ಮೇಲೆ ಗಂಗಾಜಲ ಮತ್ತು ಗೋಮೂತ್ರ ಸಿಂಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.