ADVERTISEMENT

ಘನತೆ ಮಾರಿದ ಮಾಯಾವತಿ: ಆರೋಪ

ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಹೇಳಿಕೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 19:17 IST
Last Updated 20 ಜನವರಿ 2019, 19:17 IST
ಮಾಯಾವತಿ
ಮಾಯಾವತಿ   

ಚಂದೋಲಿ/ಉತ್ತರ ಪ್ರದೇಶ: ಅಧಿಕಾರದ ಆಸೆಗಾಗಿ ಘನತೆ, ಸ್ವಾಭಿಮಾನ ಮಾರಿಕೊಂಡಿರುವ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ಹೆಣ್ಣು ಜಾತಿಗೆ ಕಳಂಕ ಎಂದು ಬಿಜೆಪಿ ಶಾಸಕಿ ಸಾಧನಾ ಸಿಂಗ್‌ ಶನಿವಾರ ಚಂದೋಲಿಯಲ್ಲಿ ನಡೆದ ರ‍್ಯಾಲಿಯಲ್ಲಿ ಟೀಕಿಸಿದ್ದಾರೆ.

ಈ ಅವಹೇಳನಕಾರಿ ಮಾತುಗಳಿಂದ ಶಾಸಕಿ ಸಾಧನಾ ಸಿಂಗ್‌ ಹೊಸ ವಿವಾದವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿ ಮಿತ್ರಪಕ್ಷಗಳೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಸಾಧನಾ ಅವರ ಮಾತುಗಳನ್ನು ಖಂಡಿಸಿದ್ದಾರೆ.

ಸಮಾಜವಾದಿ ಪಕ್ಷದೊಂದಿಗೆ ಮತ್ತೆ ಕೈಜೋಡಿಸಿದ ಮಾಯಾವತಿ ಅವರು ‘ಅತ್ತ ಹೆಣ್ಣೂ ಅಲ್ಲ, ಇತ್ತ ಗಂಡೂ ಅಲ್ಲದ ತೃತೀಯ ಲಿಂಗಿಗಳಿಗಿಂತಲೂ ಕೀಳು’ ಎಂದು ಸಾಧನಾ ಹರಿಹಾಯ್ದಿದ್ದಾರೆ.

ADVERTISEMENT

ಭಾಷಣದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ವಿವರಣೆ ಕೋರಿ ಸಾಧನಾ ಅವರಿಗೆ ನೋಟಿಸ್‌ ನೀಡುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗವು ಹೇಳಿದೆ.

ಬಿಜೆಪಿ ನಾಯಕರ ಹತಾಶೆಯ ಪ್ರತೀಕ

ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಾಧನಾ ಸಿಂಗ್‌ ಅವರು ಮಾಯಾವತಿ ವಿರುದ್ಧ ಆಡಿರುವ ಮಾತುಗಳನ್ನು ಖಂಡಿಸಿದ್ದಾರೆ.

‘ಇದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ. ತೀವ್ರ ಹತಾಶರಾಗಿರುವ ಕಾರಣ ಬಿಜೆಪಿ ನಾಯಕರು ಇಂತಹ ನಿಂದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ’ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಇದು ಮಾಯಾವತಿ ಅವರಿಗೆ ಮಾಡಿದ ಅವಮಾನವಲ್ಲ, ಇಡೀ ಹೆಣ್ಣು ಕುಲಕ್ಕೆ ಮಾಡಿದ ಅವಮಾನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾಧನಾ ಸಿಂಗ್‌ ಅವರ ಹೇಳಿಕೆ ಬಿಜೆಪಿಯು ಮಹಿಳೆಯರು ಮತ್ತು ಸಮಾಜದ ಬಗ್ಗೆ ಎಂತಹ ಅಭಿಪ್ರಾಯ ಹೊಂದಿದೆ ಎಂದು ತೋರಿಸುತ್ತದೆ ಎಂದು ರಾಷ್ಟ್ರೀಯ ಲೋಕದಳ ಉಪಾಧ್ಯಕ್ಷ ಜಯಂತ್‌ ಸಿಂಗ್‌ ಹೇಳಿದ್ದಾರೆ.

ವೈಯಕ್ತಿಕ ತೇಜೋವಧೆ ಮಾಡುವ ಮಾತು ಸರಿಯಲ್ಲ ಎಂದು ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಅಧ್ಯಕ್ಷ ರಾಮದಾಸ್‌ ಆಠವಲೆ ಪ್ರತಿಕ್ರಿಯಿಸಿದ್ದಾರೆ.

ಮಾನಹಾನಿ ಮತ್ತು ತೇಜೋವಧೆ ಮಾಡುವ ನಿಂದನಾತ್ಮಕ ಹೇಳಿಕೆಗಳು ಯಾರಿಗೂ ಶೋಭೆ ತರುವುದಿಲ್ಲ. ನಿಜಕ್ಕೂ ಇದು ಖಂಡನಾರ್ಹ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

ಸಾಧನಾ ಸಿಂಗ್‌ ಕ್ಷಮೆ

ಚಂದೋಲಿ:ಟೀಕೆ ವ್ಯಕ್ತವಾಗುತ್ತಿದ್ದಂತೆ ಈ ಕುರಿತು ಕ್ಷಮೆಯಾಚಿಸಿರುವ ಸಾಧನಾ ಸಿಂಗ್‌, ‘ಯಾರನ್ನೂ ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಒಂದು ಹೆಣ್ಣಿನ ನೋವನ್ನು ನಾನು ಹಂಚಿಕೊಂಡಿದ್ದೇನಷ್ಟೇ. 1995ರಲ್ಲಿ ಬಿಜೆಪಿ ನಾಯಕರು ಅವರಿಗೆ ನೀಡಿದ್ದ ಸಹಾಯವನ್ನು ನೆನಪಿಸುವುದು ನನ್ನ ಉದ್ದೇಶವಾಗಿತ್ತು. ಆದರೂ, ನನ್ನ ಹೇಳಿಕೆಗೆ ಕ್ಷಮೆ ಕೋರುತ್ತೇನೆ’ ಎಂದು ಅವರು ಹೇಳಿದ್ದಾರೆ.

* ಬಿಎಸ್‌ಪಿ–ಎಸ್‌ಪಿ ಮೈತ್ರಿಯ ನಂತರ ಬಿಜೆಪಿ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೀಗಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ

-ಎಸ್‌.ಸಿ. ಮಿಶ್ರಾ, ಬಿಎಸ್‌ಪಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.