ADVERTISEMENT

I Love Muhammad: ಯೋಗಿ ನಡವಳಿಕೆಯಿಂದ ಪಕ್ಷ ತೊರೆಯುವುದಾಗಿ ಹೇಳಿದ BJP ನಾಯಕ

ಪಿಟಿಐ
Published 3 ಅಕ್ಟೋಬರ್ 2025, 6:59 IST
Last Updated 3 ಅಕ್ಟೋಬರ್ 2025, 6:59 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಜಮ್ಮು: ಮುಸ್ಲಿಂ ಸಮುದಾಯದ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೀಡಿದ ಹೇಳಿಕೆ ಹಾಗೂ ಪೊಲೀಸರ ಪ್ರತೀಕಾರದ ಮನೋಭಾವವನ್ನು ಖಂಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕ ಜಹಾನ್‌ಝೈನ್ ಸಿರ್ವಾಲ್ ಶುಕ್ರವಾರ ಹೇಳಿದ್ದಾರೆ.

ಉತ್ತರ ಪ್ರದೇಶ ಪರಿಸ್ಥಿತಿ, ಪ್ರಧಾನಿ ನರೇಂದ್ರ ಮೋದಿಯವರ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್‌’ ಆಶಯಕ್ಕೆ ವಿರುದ್ಧವಾಗಿದೆ. ಆಧಾರರಹಿತ ಕಾನೂನು ಕ್ರಮಗಳು, ಕಠಿಣ ಕ್ರಮಗಳು ಮತ್ತು ವಿಭಜಕ ಬೆದರಿಕೆಗಳ ಮೂಲಕ ಈ ನೀತಿಗೆ ದ್ರೋಹ ಬಗೆಯಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಪ್ಪಿತಸ್ಥರನ್ನು ಉತ್ತರದಾಯಿಯನ್ನಾಗಿ ಮಾಡಲು ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಒಂದು ಸಮುದಾಯವನ್ನು ಗುರಿಯಾಗಿಸಬಾರದು ಎಂದು ಹೇಳಿದ್ದಾರೆ.

ADVERTISEMENT

ಮುಸ್ಲಿಮರಲ್ಲಿ ಭರವಸೆ ಮೂಡಿಸುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪಕ್ಷಕ್ಕೆ ರಾಜೀನಾಮೆ ನೀಡುವುದರ ಹೊರತಾಗಿ ಬೇರೆ ಆಯ್ಕೆಗಳಿಲ್ಲ ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್ 4 ರಂದು ಈದ್ ಮಿಲಾದ್ ಮೆರವಣಿಗೆ ವೇಳೆ, ‘ಐ ಲವ್ ಮೊಹಮ್ಮದ್’ ಎನ್ನುವ ಫಲಕ ತೂಗು ಹಾಕಿದ ಆರೋಪದಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ 24 ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿತ್ತು.

ಸೆಪ್ಟೆಂಬರ್ 26ರಂದು ಶುಕ್ರವಾರ ಪ್ರಾರ್ಥನೆ ಬಳಿಕ ಕೊತ್ವಾಲಿಯ ಮಸೀದಿಯ ಹೊರಗೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಗುಂಪು ‘ಐ ಲವ್ ಮೊಹಮ್ಮದ್’ ಎನ್ನುವ ಫಲಕ ಹಿಡಿದುಕೊಂಡು ಪ್ರತಿಭಟನೆ ನಡೆಸಿತ್ತು. ಈ ವೇಳೆ ನಡೆದ ಘರ್ಷಣೆ ಸಂಬಂಧ ಸ್ಥಳೀಯ ಧರ್ಮಗುರು ಸೇರಿದಂತೆ 68 ಮಂದಿಯನ್ನು ಬಂಧಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕದಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಯೋಗಿ ಆದಿತ್ಯನಾಥ ಎಚ್ಚರಿಕೆ ನೀಡಿದ್ದರು.

ಹೆಮ್ಮೆಯ ಮುಸಲ್ಮಾನನಾಗಿ, ಬಿಜೆಪಿಯ ಬದ್ಧ ನಾಯಕನಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಉತ್ತರ ಪ್ರದೇಶ ಸರ್ಕಾರದ ಇತ್ತೀಚಿನ ನಡವಳಿಕೆಯಿಂದ ತೀವ್ರ ನೋವಾಗಿದೆ. ವಿಶ್ವಾಸವನ್ನು ಪ್ರಕಟಿಸಿದ್ದಕ್ಕೆ ಎಫ್‌ಐಆರ್ ಹಾಕಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.