ADVERTISEMENT

ರಾಜಸ್ಥಾನ ಚುನಾವಣೆ: ಬಿಜೆಪಿಯ 2ನೇ ಪಟ್ಟಿ; ವಸುಂಧರಾ ರಾಜೇಗೆ ಟಿಕೆಟ್‌ ಖಾತ್ರಿ

ಪಿಟಿಐ
Published 21 ಅಕ್ಟೋಬರ್ 2023, 16:15 IST
Last Updated 21 ಅಕ್ಟೋಬರ್ 2023, 16:15 IST
ವಸುಂಧರಾ ರಾಜೇ
ವಸುಂಧರಾ ರಾಜೇ   

ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸೇರಿದಂತೆ 83 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. 

ಐವರು ಶಾಸಕರಿಗೆ ಟಿಕೆಟ್ ನೀಡಲಾಗಿದ್ದು, ಒಂಬತ್ತು ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಕಳೆದ ವರ್ಷ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಪಕ್ಷದಿಂದ ಅಮಾನತುಗೊಂಡಿರುವ ಧೋಲ್‌ಪುರ ಕ್ಷೇತ್ರದ ಶಾಸಕಿ ಶೋಭಾರಾಣಿ ಕುಶ್ವಾಹ ಅವರಿಗೂ ಟಿಕೆಟ್ ನೀಡಿಲ್ಲ.

ಎರಡನೇ ಪಟ್ಟಿಯಲ್ಲಿ ಯಾವುದೇ ಸಂಸದರ ಹೆಸರಿಲ್ಲ. 10 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಒಟ್ಟು 200 ಸ್ಥಾನಗಳ ಪೈಕಿ ಈವರೆಗೆ 124 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದಂತಾಗಿದೆ. 

ADVERTISEMENT

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಗಿದೆ. 

ನಾಲ್ಕು ಬಾರಿ ಗೆಲುವು ಸಾಧಿಸಿರುವ ಝಾಲರಾಪಾಟನ ಕ್ಷೇತ್ರದಿಂದ ವಸುಂಧರಾ ಸ್ಪರ್ಧಿಸಲಿದ್ದಾರೆ. ಇಬ್ಬರು ಮಾಜಿ ಸಚಿವರು ಸೇರಿದಂತೆ ರಾಜೇ ಅವರ ಕೆಲವು ಬೆಂಬಲಿಗರಿಗೆ ಟಿಕೆಟ್ ನೀಡಲಾಗಿದೆ.

ಪಕ್ಷದ ಹಿರಿಯ ನಾಯಕ ಭೈರೋನ್‌ ಸಿಂಗ್‌ ಶೇಖಾವತ್‌ ಅವರ ಅಳಿಯ, ಐದು ಬಾರಿ ಶಾಸಕರಾಗಿರುವ ನರ್ಪತ್ ಸಿಂಗ್ ರಾಜ್ವಿ ಅವರನ್ನು ವಿದ್ಯಾನಗರ ಬದಲು ಚಿತ್ತೋರ್ಗಢದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ವಸುಂಧರಾ ರಾಜೇ ಅವರು ಸಿಂಧಿಯಾ ರಾಜಮನೆತನದಿಂದ ಬಂದವರು. ಅವರ ತಾಯಿ ವಿಜಯರಾಜೇ ಸಿಂಧಿಯಾ ಭಾರತೀಯ ಜನ ಸಂಘ (ಬಿಜೆಎಸ್) ಮತ್ತು ನಂತರ ಬಿಜೆಪಿಯಲ್ಲಿ ಪ್ರಮುಖ ನಾಯಕಿಯಾಗಿದ್ದರು. ಅವರ ಸಹೋದರ ಮಾಧವರಾವ್ ಸಿಂಧಿಯಾ ಕಾಂಗ್ರೆಸ್ ನಾಯಕರಾಗಿದ್ದರು.

ಇತ್ತೀಚೆಗೆ ಪಕ್ಷಕ್ಕೆ ಸೇರಿದ ಮಹಾರಾಣಾ ಪ್ರತಾಪ್ ಸಿಂಗ್ ಅವರ ವಂಶಸ್ಥ ವಿಶ್ವರಾಜ್ ಸಿಂಗ್ ಮೇವಾರ್ ಅವರಿಗೂ ಟಿಕೆಟ್ ನೀಡಲಾಗಿದೆ.  2018ರಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಪಿ. ಜೋಶಿ ಗೆದ್ದ ನಾಥದ್ವಾರದಿಂದ ಅವರನ್ನು ಕಣಕ್ಕಿಳಿಸಲಾಗಿದೆ.

ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸತೀಶ್ ಪೂನಿಯಾ ಅವರನ್ನು ಅಂಬರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಪ್ರಮುಖ ನಾಯಕ ರಾಜೇಂದ್ರ ರಾಥೋಡ್‌ ಹೆಸರು ಸಹ ಪಟ್ಟಿಯಲ್ಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.