
ಠಾಣೆ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ ಸಹ ಆರೋಪಿ ತುಷಾರ್ ಆಪ್ಟೆಯನ್ನು ಠಾಣೆ ಜಿಲ್ಲೆಯ ಕುಲಂಗಾವ್–ಬದ್ಲಾಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಕೌನ್ಸಿಲರ್ ಆಗಿ ಬಿಜೆಪಿ ನಾಮ ನಿರ್ದೇಶನ ಮಾಡಿದೆ.
ಆಪ್ಟೆ ನೇಮಕವನ್ನು ಕೌನ್ಸಿಲ್ ಅಧ್ಯಕ್ಷೆ ರುಚಿತಾ ಘೋರ್ಪಡೆ ಖಚಿತಪಡಿಸಿದ್ದಾರೆ. ತುಷಾರ್ ಸೇರಿ ಒಟ್ಟು ಐವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಪೈಕಿ ಬಿಜೆಪಿ ಹಾಗೂ ಶಿವಸೇನಾದಿಂದ ತಲಾ ಎರಡು ಹಾಗೂ ಎನ್‌ಸಿಪಿಯಿಂದ ಒಬ್ಬ ಸೇರಿದ್ದಾರೆ.
ತುಷಾರ್ ಆಪ್ಟೆ ಹೊರತಾಗಿ ಶಗೋಫ್ ಗೋರ್ (ಬಿಜೆಪಿ), ಫ್ರಭಾಕರ್ ಪಾಟೀಲ್ (ಎನ್‌ಸಿಪಿ), ದಿಲೀಪ್ ಬೈಕರ್ (ಶಿವಸೇನಾ) ಹಾಗೂ ಹೇಮಂತ್ ಚುತುರೆಯನ್ನು (ಶಿವಸೇನಾ) ನಾಮ ನಿರ್ದೇಶನ ಮಾಡಲಾಗಿದೆ.
ಲೈಂಗಿಕ ದೌರ್ಜನ್ಯ ನಡೆದ ವೇಳೆ ಶಾಲೆಯ ಕಾರ್ಯದರ್ಶಿಯಾಗಿದ್ದ ಅಪ್ಟೆ, ಪ್ರಕರಣವನ್ನು ಮುಚ್ಚಿ ಹಾಕಿದ ಆರೋಪ ಎದುರಿಸುತ್ತಿದ್ದಾರೆ.
ವಿದ್ಯಾರ್ಥಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ವಿಫಲವಾಗಿದ್ದರಿಂದ ಪೋಕ್ಸೊ ಕಾಯ್ದೆಯಡಿ ಶಾಲೆ ಸಮಿತಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಘಟನೆ ನಡೆದು 44 ದಿನಗಳ ಬಳಿಕ ಆಪ್ಟೆಯನ್ನು ಬಂಧಿಸಲಾಗಿತ್ತು. 48 ಗಂಟೆಯೊಳಗೆ ಜಾಮೀನು ಲಭಿಸಿತ್ತು. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ.
‘ತುಷಾರ್ ಆಪ್ಟೆಯವರು ಸಾಮಾಜಿಕ ಕಾರ್ಯಕರ್ತ ಹಾಗೂ ಖ್ಯಾತ ಶಿಕ್ಷಣ ಸಂಸ್ಥೆಯ ಪದಾಧಿಕಾರಿ. ಅವರ ಮೇಲೆ ಆರೋಪ ಇದ್ದರೂ, ಅದು ಸಾಬೀತಾಗಿಲ್ಲ. ಪ್ರಕರಣದ ಮುಖ್ಯ ಆರೋಪಿಗೆ ಶಿಕ್ಷೆಯಾಗಿದೆ. ಅವರು ಪಕ್ಷಕ್ಕೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಹೀಗಾಗಿ ಅವರಿಗೆ ಜವಾಬ್ದಾರಿ ನೀಡಲಾಗಿದೆ’ ಎಂದು ಬಿಜೆಪಿ ಕೌನ್ಸಿಲರ್ ರಾಜನ್ ಘೋರ್ಪಡೆ ಸಮರ್ಥಿಸಿಕೊಂಡಿದ್ದಾರೆ.
ಶಾಲೆಯ ಆವರಣದಲ್ಲಿ ಅಕ್ಷಯ್ ಶಿಂದೆ ಎಂಬಾತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಇದಯ ಪೋಷಕರು ಮತ್ತು ಸ್ಥಳೀಯರಿಂದ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು.
ಠಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯ ಶೌಚಾಲಯದೊಳಗೆ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರಮುಖ ಆರೋಪಿ ಅಕ್ಷಯ್ ಶಿಂದೆಯನ್ನು (24) ಆಗಸ್ಟ್ 2024 ರಲ್ಲಿ ಬಂಧಿಸಲಾಗಿತ್ತು.
ಸೆಪ್ಟೆಂಬರ್ 23 ರಂದು, ನವಿ ಮುಂಬೈನ ತಳೋಜಾ ಜೈಲಿನಿಂದ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದಾಗ ಪೊಲೀಸ್ ಗುಂಡಿನ ಚಕಮಕಿಯಲ್ಲಿ ಆತ ಸಾವಿಗೀಡಾಗಿದ್ದ. ವ್ಯಾನ್‌ನಲ್ಲಿದ್ದ ಒಬ್ಬ ಪೊಲೀಸ್ ಅಧಿಕಾರಿಯ ಬಂದೂಕನ್ನು ಕಸಿದು, ಗುಂಡು ಹಾರಿಸಿಲು ಯತ್ನಿಸಿದಾಗ, ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತ ಸಾವಿಗೀಡಾಗಿದ್ದ. ಆತನ ಪತ್ನಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕರೆದೊಯ್ಯಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.