ADVERTISEMENT

ಮಂದಿರ ನಿರ್ಮಾಣದ ಸುಗ್ರಿವಾಜ್ಞೆ ಬಗ್ಗೆ ಬಿಜೆಪಿ ಚಿಂತಿಸಿಲ್ಲ: ಕೈಲಾಶ್ ವಿಜಯವರ್ಗಿಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 12:26 IST
Last Updated 2 ಡಿಸೆಂಬರ್ 2018, 12:26 IST
   

ನವದೆಹಲಿ: ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರಿವಾಜ್ಞೆ ಹೊರಡಿಸುವ ಬಗ್ಗೆ ಬಿಜೆಪಿ ಚಿಂತನೆ ಮಾಡಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗಿಯ ತಿಳಿಸಿದ್ದಾರೆ.

ರಾಮ ಮಂದಿರವನ್ನು ನಿರ್ಮಾಣ ಮಾಡಲು ಬಿಜೆಪಿಗೆ ಮಾತ್ರವೇ ಸಾಧ್ಯ, ಮತ್ತೆ ಯಾರಿಗೂ ಅಂತಹ ತಾಕತ್ತು ಇಲ್ಲ ಎಂದು ಕೈಲಾಶ್‌ ವಿಜಯವರ್ಗಿಯ ತಿಳಿಸಿದ್ದಾರೆ.

ತೀರ್ಪಿನ ವಿಷಯಕ್ಕೆ ಸಂಬಂಧಿಸಿದಂತೆ ನಾವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ಪ್ರಕರಣ ಕೋರ್ಟ್‌ ಅಂಗಳದಲ್ಲಿ ಇರುವುದರಿಂದ ನಾವು ಆತುರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಜನರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸುಗ್ರಿವಾಜ್ಞೆ ಘೋಷಣೆ ಮಾಡುವಂತಹ ಚಿಂತನೆಯನ್ನು ಪಕ್ಷ ಮಾಡಿಲ್ಲ ಎಂದು ವಿಜಯವರ್ಗಿಯ ತಿಳಿಸಿದ್ದಾರೆ.

ADVERTISEMENT

ಜನವರಿ ತಿಂಗಳ ಮೊದಲ ವಾರದಲ್ಲಿ ರಾಮಜನ್ಮ ಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣದ ವಿಚಾರಣೆ ನಡೆಯಲಿದೆ. ಸುಗ್ರಿವಾಜ್ಞೆ ಘೋಷಣೆ ಮಾಡುವಂತೆ ಶಿವಸೇನೆ ಸೇರಿದಂತೆ ಕೆಲ ರಾಜಕೀಯ ಪಕ್ಷಗಳು ಹಾಗೂ ವಿಎಚ್‌ಪಿ, ಆರ್‌ಎಸ್ಎಸ್‌ ಒತ್ತಾಯ ಮಾಡುತ್ತಿವೆ. ಇದೇ ಒತ್ತಾಯವನ್ನು ನ್ಯಾಯಾಲಯದ ಮೇಲೂ ಹಾಕಬೇಕು ಎಂದು ಅವರು ಒತ್ತಿ ಹೇಳಿದರು.

ಬಿಜೆಪಿ ಮೊದಲಿಗೆ ಈ ವಿಷಯವನ್ನು ಎತ್ತಲಿಲ್ಲ, ಸಂತರು ಮತ್ತು ಹಿಂದೂಪರ ಸಂಘಟನೆಗಳು ಈ ವಿಷಯವನ್ನು ದೊಡ್ಡದು ಮಾಡಿವೆ. ರಾಮಮಂದಿರ ವಿಷಯ ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುವುದಿಲ್ಲ ಹಾಗೇ ಚುನಾವಣೆಗೂ ಹೋಗುವುದಿಲ್ಲ, ನಾವು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ವಿಜಯವರ್ಗಿಯ ತಿಳಿಸಿದರು. ಆದರೆ ವಿರೋಧ ಪಕ್ಷಗಳು ’ರಾಮಮಂದಿರಾ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿ, ಚುನಾವಣೆಯಲ್ಲಿ ಮತಗಳಿಸಲು ಯತ್ನಿಸುತ್ತಿದೆ ಎಂಬ ಸುಳ್ಳು ಆರೋಪ ಮಾಡುತ್ತಿವೆ ಎಂದು ಅವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು

ಬಿಜೆಪಿಯಿಂದ ಮಾತ್ರ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯ, ಇದು ಬೇರೆ ಯಾರಿಂದಲೂ ಸಾಧ್ಯವಿಲ್ಲ, ನ್ಯಾಯಾಲಯದ ತೀರ್ಮಾನ, ಸಂವಿಧಾನ ಮತ್ತು ಸಾಮಾಜಿಕ ಕಾಳಜಿಯ ಪರಿಮಿತಿಯೊಳಗೆ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.