ADVERTISEMENT

ಸಿಖ್‌–ಹಿಂದೂಗಳ ನಡುವೆ ಬಿರುಕಿಗೆ ಬಿಜೆಪಿ ಯತ್ನ: ಸುಖಬೀರ್‌ ಸಿಂಗ್‌

ಪಿಟಿಐ
Published 15 ಡಿಸೆಂಬರ್ 2020, 20:29 IST
Last Updated 15 ಡಿಸೆಂಬರ್ 2020, 20:29 IST
ಸುಖಬೀರ್‌ ಸಿಂಗ್‌ ಬಾದಲ್‌
ಸುಖಬೀರ್‌ ಸಿಂಗ್‌ ಬಾದಲ್‌   

ಚಂಡೀಗಡ: ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌‌ ಅವರು ಮಾಜಿ ಮಿತ್ರಪಕ್ಷ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್‌ನಲ್ಲಿ ಸಿಖ್ಖರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುತ್ತಿರುವ ಬಿಜೆಪಿಯೇ ನಿಜವಾದ ‘ತುಕ್ಡೆ ತುಕ್ಡೆ ಗ್ಯಾಂಗ್‌’ ಎಂದು ಅವರು ಆರೋಪಿಸಿದ್ದಾರೆ.

ಕೃಷಿ ಕ್ಷೇತ್ರದ ಇತ್ತೀಚಿನ ಮೂರು ಕಾಯ್ದೆಗಳಿಗೆ ಸಂಬಂಧಿಸಿ ‘ದುರಂಹಕಾರದ ಧೋರಣೆ’ಯನ್ನು ಕೈಬಿಡಬೇಕು, ರೈತರಿಗೆ ಏನು ಬೇಕೋ ಅದನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ. ಸಿಖ್‌ ಮತ್ತು ಹಿಂದೂಗಳ ನಡುವೆ ಬಿರುಕು ಮೂಡಿಸುವ ಕೆಲಸ ಮಾಡಬಾರದು ಎಂದು ಅವರು ಬಿಜೆಪಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

‘ಕೇಂದ್ರ ಸರ್ಕಾರದ ಪರವಾಗಿ ಮಾತನಾಡುವ ಎಲ್ಲರನ್ನೂ ‘ದೇಶಭಕ್ತರು’ ಎಂದು ಕರೆಯಲಾಗುತ್ತದೆ. ವಿರುದ್ಧ ಮಾತನಾಡುವವರನ್ನು ‘ತುಕ್ಡೆ ತುಕ್ಡೆ ಗ್ಯಾಂಗ್‌’ ಎನ್ನಲಾಗುತ್ತಿದೆ. ದೇಶದ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್‌’ ಬಿಜೆಪಿ ಎಂದು ಅವರು ಹೇಳಿದ್ದಾರೆ.

ADVERTISEMENT

‘ದೇಶದ ಏಕತೆಯನ್ನು ಬಿಜೆಪಿ ಛಿದ್ರ ಮಾಡಿದೆ. ಹಿಂದೂ–ಮುಸ್ಲಿಮರ ನಡುವೆ ಬಿರುಕು ಮೂಡಿಸುವ ನಾಚಿಕೆಗೆಟ್ಟ ಕೆಲಸ ಮಾಡಿರುವ ಬಿಜೆಪಿ, ಈಗ ಪಂಜಾಬ್‌ನ ಶಾಂತಿಪ್ರಿಯ ಹಿಂದೂಗಳನ್ನು ಸಿಖ್‌ ಸಹೋದರರ ವಿರುದ್ಧ ಎತ್ತಿಕಟ್ಟುತ್ತಿದೆ. ದೇಶಪ್ರೇಮಿ ಪಂಜಾಬ್‌ ಅನ್ನು ಕೋಮು ಜ್ವಾಲೆಗೆ ತಳ್ಳುತ್ತಿದೆ’ ಎಂದು ಸುಖಬೀರ್‌ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರದ ಮೂರು ಕಾಯ್ದೆಗಳನ್ನು ಜಾರಿಗೆ ತಂದದ್ದನ್ನು ಖಂಡಿಸಿ ಎನ್‌ಡಿಎ ಮೈತ್ರಿಕೂಟದಿಂದ ಎಸ್‌ಎಡಿ ಹೊರಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.