ADVERTISEMENT

ಹೇಳಿಕೆ ಹಿಂಪಡೆಯಲು ನಕಾರ: ತುಷಾರ್ ಗಾಂಧಿಯನ್ನು ಬಂಧಿಸುವಂತೆ BJP, RSS ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 9:30 IST
Last Updated 14 ಮಾರ್ಚ್ 2025, 9:30 IST
<div class="paragraphs"><p>ತುಷಾರ್ ಗಾಂಧಿ</p></div>

ತುಷಾರ್ ಗಾಂಧಿ

   

ಪಿಟಿಐ ಚಿತ್ರ

ತಿರುವನಂತಪುರ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ನೀಡಿದ ಹೇಳಿಕೆಯನ್ನು ಹಿಂಪಡೆಯಲು ಮತ್ತು ವಿಷಾದ ವ್ಯಕ್ತಪಡಿಸಲು ನಿರಾಕರಿಸಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಬಂಧನಕ್ಕೆ ಕೇಸರಿ ಪಡೆ ಶುಕ್ರವಾರ ಒತ್ತಾಯಿಸಿದೆ.

ADVERTISEMENT

ಕೇರಳದ ತಿರುವನಂತಪುರದ ನಯ್ಯಟ್ಟಿಂಕರದಲ್ಲಿ ಗಾಂಧಿವಾದಿ ಪಿ. ಗೋಪಿನಾಥನ್ ನಾಯರ್ ಅವರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಗುರುವಾರ ಮಾತನಾಡಿದ್ದ ತುಷಾರ್, ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಎರಡೂ ಅಪಾಯಕಾರಿ ಹಾಗೂ ಕಪಟತನವಿರುವ ಶತ್ರುಗಳು. ಆರ್‌ಎಸ್‌ಎಸ್‌ ಎಂದರೆ ವಿಷವಿದ್ದಂತೆ’ ಎಂದು ಆರೋಪಿಸಿದ್ದರು.

ತುಷಾರ್ ಅವರ ಈ ಹೇಳಿಕೆ ಖಂಡಿಸಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು, ಅವರಿದ್ದ ಕಾರನ್ನು ತಡೆದು, ಘೋಷಣೆ ಕೂಗಿದ್ದರು. ‌

ಕೊಚ್ಚಿ ಬಳಿಯ ಅಲುವದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತುಷಾರ್, ‘ನಾನು ಒಮ್ಮೆ ನೀಡಿದ ಹೇಳಿಕೆಯನ್ನು ಹಿಂಪಡೆಯುವುದಿಲ್ಲ. ವಿಷಾದವನ್ನೂ ವ್ಯಕ್ತಪಡಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನನ್ನ ಹೇಳಿಕೆ ನಂತರ ನಡೆದ ಬೆಳವಣಿಗೆಗಳು ಈ ದೇಶದ್ರೋಹಿಗಳನ್ನು ಬಯಲಿಗೆಳಯಲು ಇನ್ನಷ್ಟು ಪ್ರೇರೇಪಿಸಿ, ಬಲಿಷ್ಠಗೊಳಿಸಿವೆ. ಈ ಎರಡೂ ಸಂಸ್ಥೆಗಳ ವಿರುದ್ಧ ಕೈಗೊಳ್ಳಬೇಕಾದ ಹೋರಾಟವು ಸ್ವಾತಂತ್ರ್ಯ ಹೋರಾಟಕ್ಕಿಂತ ಅತ್ಯಗತ್ಯವಾಗಿದೆ. ‘ಸಂಘ’ ಎಂಬುದು ನಮ್ಮೆಲ್ಲರ ಸಮಾನ ಶತ್ರುವಾಗಿದೆ. ಅದರ ಮುಖವಾಡವನ್ನು ಕಳಚಲೇಬೇಕು’ ಎಂದು ಗುಡುಗಿದ್ದಾರೆ.

‘ನನ್ನ ಮುತ್ತಜ್ಜನ ಕೊಲೆಗಾರರ ವಂಶದವರು ಮಹಾತ್ಮಾ ಗಾಂಧಿ ಅವರ ಭಾವಚಿತ್ರದ ಬಳಿ ಹೋಗಿ ಬಂದೂಕು ಇಟ್ಟು ಗುಂಡು ಹಾರಿಸುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗಾಂಧೀಜಿ ಮರಿ ಮೊಮ್ಮಗನಾಗಿರುವುದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ತುಷಾರ್

ತುಷಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ‘ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗನಾಗಿ ಹುಟ್ಟಿರುವುದನ್ನೇ ಬಂಡವಾಳ ಮಾಡಿಕೊಳ್ಳಲು ಇವರು ಯತ್ನಿಸುತ್ತಿದ್ದಾರೆ. ಪ್ರತಿಮೆ ಅನಾವರಣಕ್ಕೆ ತುಷಾರ್‌ ಅವರನ್ನು ಆಹ್ವಾನಿಸಿದವರಿಗೆ ಅವರ ಹಿನ್ನೆಲೆಯ ಪರಿಚಯವಿದ್ದಿರಲಿಲ್ಲ ಎಂದೆನಿಸುತ್ತದೆ’ ಎಂದಿದೆ.

‘ತುಷಾರ್ ಹೆಸರಿನ ಮುಂದೆ ‘ಗಾಂಧಿ’ ಎಂಬ ಉಪನಾಮ ಇದ್ದ ಮಾತ್ರಕ್ಕೆ ರಾಷ್ಟ್ರಪಿತ ಸ್ಥಾನಮಾನ ಸಿಗುತ್ತದೆ ಎಂದು ಭಾವಿಸಿರುವುದೇ ಭ್ರಮೆ. ಪಕ್ಷದ ವಿರುದ್ಧ ನೀಡಿದ ಹೇಳಿಕೆಗಾಗಿ ಇವರನ್ನು ಬಂಧಿಸಬೇಕು’ ಎಂದು ಬಿಜೆಪಿ ಮುಖಂಡ ವಿ. ಮುರಳೀಧರನ್ ಆಗ್ರಹಿಸಿದ್ದಾರೆ.

ವಾಕ್‌ಸ್ವಾತಂತ್ರ್ಯ ಹತ್ತಿಕ್ಕಲು ಯತ್ನಿಸಿದರೆ ಸಹಿಸಲ್ಲ

ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗನ ವಿರುದ್ಧ ಘೋಷಣೆ ಕೂಗಿದ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಐವರು ಕಾರ್ಯಕರ್ತರನ್ನು ಬಂಧಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಸರ್ಕಾರವನ್ನು ಬಿಜೆಪಿ ಮುಖಂಡರು ಖಂಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ, ‘ತುಷಾರ್‌ ಗಾಂಧಿ ಮೇಲೆ ಸಂಘ ಪರಿವಾರದ ದಾಳಿ ಖಂಡನೀಯ. ಪ್ರಜಾಪ್ರಭುತ್ವ ಸಮಾಜದಲ್ಲಿ ವಾಕ್‌ ಸ್ವಾತಂತ್ರ್ಯ ಹತ್ತಿಕ್ಕುವ ಯಾವುದೇ ಕೃತ್ಯ ಎಸಗಲು ಅವಕಾಶ ನೀಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.