ನವದೆಹಲಿ: ಸಂಭಲ್ ಹಿಂಸಾಚಾರ ಸಂತ್ರಸ್ತರನ್ನು ಭೇಟಿಯಾಗಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಅವಕಾಶ ನಿರಾಕರಿಸಿರುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ.
‘ಬಿಜೆಪಿ ಮತ್ತು ಆರ್‌ಎಸ್ಎಸ್ ತನ್ನ ವಿಭಜಕ ಕಾರ್ಯಸೂಚಿ ಮೂಲಕ ಸಂವಿಧಾನವನ್ನು ಹರಿದು ಚೂರು ಮಾಡುವಲ್ಲಿ ನಿರತವಾಗಿವೆ. ಸಂಭಾಲ್‌ನಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ತಡೆ ನೀಡಿರುವುದು ಇದಕ್ಕೊಂದು ನಿದರ್ಶವಾಗಿದೆ’ ಎಂದು ಹೇಳಿದರು.
‘ಎರಡು ಸಮುದಾಯಗಳ ನಡುವೆ ದ್ವೇಷ ಹಡುವುದೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮುಖ್ಯ ಕಾರ್ಯಸೂಚಿಯಾಗಿದೆ. ಅವರು ಸಂವಿಧಾನ ಅಂಗೀಕರಿಸಿರುವ ಪ್ರಾರ್ಥನಾ ಕಾಯ್ದೆಯನ್ನು ಹರಿದು ಹಾಕಿದ್ದಲ್ಲದೇ, ತಮ್ಮ ದ್ವೇಷದ ಮಾರುಕಟ್ಟೆಯ ಶಾಖೆಗಳನ್ನು ದೇಶದ ಎಲ್ಲೆಡೆ ತೆರೆಯಲು ಬಯಸುತ್ತಿದ್ದಾರೆ’ ಎಂದು ಹೇಳಿದರು.
ಆದರೆ, ಕಾಂಗ್ರೆಸ್ ಪ್ರೀತಿಯ ಅಂಗಡಿಯನ್ನು ತೆರೆಯುವುದನ್ನು ಮುಂದುವರಿಸಲಿದ್ದು, ವಿವಿಧತೆಯಲ್ಲಿ ಏಕತೆ ತತ್ವದ ಮೂಲಕ ಸಮಾಜವನ್ನು ಒಗ್ಗೂಡಿಸುತ್ತದೆ ಎಂದರು.
ಬುಧವಾರ ಸಂಭಲ್‌ಗೆ ತೆರಳುತ್ತಿದ್ದ ವೇಳೆ ಗಾಜಿಪುರ ಗಡಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ತಡೆದಿದ್ದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರವೇಶ ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.