ADVERTISEMENT

ಅತ್ಯಾಚಾರಿಗೆ ಮರಣದಂಡನೆ ಶಿಕ್ಷೆ ಕುರಿತು ಗೆಹಲೋತ್‌ ಹೇಳಿಕೆ: ಬಿಜೆಪಿ ಕಿಡಿ

ಪಿಟಿಐ
Published 7 ಆಗಸ್ಟ್ 2022, 16:09 IST
Last Updated 7 ಆಗಸ್ಟ್ 2022, 16:09 IST
ಅಶೋಕ್ ಗೆಹಲೋತ್ – ಪಿಟಿಐ ಚಿತ್ರ
ಅಶೋಕ್ ಗೆಹಲೋತ್ – ಪಿಟಿಐ ಚಿತ್ರ   

ಜೈಪುರ: ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆ ಕಾನೂನು ಜಾರಿಗೊಳಿಸಿದ ಬಳಿಕ ದೇಶದಲ್ಲಿ ಅತ್ಯಾಚಾರ ಸಂತ್ರಸ್ತೆಯರ ಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂಬ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿಕೆ ವಿರುದ್ಧ ಬಿಜೆಪಿ ಕಿಡಿ ಕಾರಿದೆ.

ಮಹಿಳೆಯರ ವಿರುದ್ಧ ರಾಜ್ಯದಲ್ಲಿ ದೌರ್ಜನ್ಯ ಹೆಚ್ಚುತ್ತಿದ್ದು, ತಮ್ಮ ದೌರ್ಬಲ್ಯವನ್ನು ಮರೆಮಾಚಲು ಗೆಹಲೋತ್ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಅಶೋಕ್ ಗೆಹಲೋತ್ ಹೇಳಿಕೆ ದುರದೃಷ್ಟಕರ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹೇಳಿದ್ದಾರೆ.

ADVERTISEMENT

‘ಕಳೆದ ಮೂರು ವರ್ಷಗಳಲ್ಲಿ ರಾಜಸ್ಥಾನವು ಸ್ತ್ರೀಯರ ವಿರುದ್ಧದ ದೌರ್ಜನ್ಯಗಳ ಕೇಂದ್ರವಾಗಿ ಹೊರಹೊಮ್ಮಿದೆ. ವೈಫಲ್ಯಗಳನ್ನು ಮರೆಮಾಚಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸಮಸ್ಯೆಯನ್ನು ತಿರುಚುತ್ತಿರುವುದು ವಿಷಾದನೀಯ’ ಎಂದು ಶೆಖಾವತ್ ಹೇಳಿದ್ದಾರೆ.

ಗೆಹಲೋತ್ ಹೇಳಿಕೆಯು ದುರದೃಷ್ಟಕರ ಮತ್ತು ನಾಚಿಕೆಗೇಡಿನಿಂದ ಕೂಡಿದೆ ಎಂದು ರಾಜಸ್ಥಾನ ವಿಧಾನಸಭೆ ಪ್ರತಿಪಕ್ಷ ನಾಯಕ ರಾಜೇಂದ್ರ ರಾಥೋಡ್ ಟೀಕಿಸಿದ್ದಾರೆ.

ಗೃಹ ಇಲಾಖೆಯನ್ನೂ ಗೆಹಲೋತ್ ಹೊಂದಿದ್ದಾರೆ. ತಮ್ಮ ಸರ್ಕಾರದ ವೈಫಲ್ಯಗಳಿಂದ ಅವರು ನುಣುಚಿಕೊಳ್ಳುವಂತಿಲ್ಲ ಎಂದು ರಾಥೋಡ್ ಹೇಳಿದ್ದಾರೆ.

ಏನು ಹೇಳಿದ್ದರು ಅಶೋಕ್ ಗೆಹಲೋತ್?

ದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಅಶೋಕ್ ಗೆಹಲೋತ್, ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನನ್ನು ಜಾರಿಗೊಳಿಸಿದಂದಿನಿಂದ ದೇಶದಲ್ಲಿ ಅತ್ಯಾಚಾರ ಸಂತ್ರಸ್ತೆಯರ ಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಿದ್ದರು.

‘ನಿರ್ಭಯಾ ಪ್ರಕರಣದ ಬಳಿಕ ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ ಕಾನೂನು ಜಾರಿಗೊಳಿಸಿದ ನಂತರ ಸಂತ್ರಸ್ತೆಯರನ್ನು ಹತ್ಯೆ ಮಾಡುವ ಘಟನೆಗಳು ಹೆಚ್ಚಾಗಿವೆ. ನಾಳೆ ತನ್ನ ವಿರುದ್ಧ ಸಾಕ್ಷಿಯಾಗಬಹುದು ಎಂಬ ಭೀತಿಯಿಂದ ಅತ್ಯಾಚಾರಿಯು ಸಂತ್ರಸ್ತೆಯನ್ನು ಹತ್ಯೆ ಮಾಡುತ್ತಾನೆ. ಇದು ದೇಶದಾದ್ಯಂತ ನಡೆಯುತ್ತಿದೆ. ಇದು ಬಹಳ ಅಪಾಯಕಾರಿ’ ಎಂದು ಗೆಹಲೋತ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.