ಸಾಂದರ್ಭಿಕ ಚಿತ್ರ
ನವದೆಹಲಿ: ಆಡಳಿತಾರೂಢ ಬಿಜೆಪಿಯು 2022–23ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ಗಿಂತ ಐದು ಪಟ್ಟು ಹೆಚ್ಚು ಹಣ ಖರ್ಚು ಮಾಡಿದೆ. ಅಲ್ಲದೆ ಬಾಂಡ್‌ಗಳ ಮೂಲಕ ದೇಣಿಗೆ ರೂಪದಲ್ಲಿ ಏಳು ಪಟ್ಟು ಅಧಿಕ ಹಣ ಸಂಗ್ರಹಿಸಿದೆ ಎಂಬುದು ಆಡಿಟ್ ವರದಿಯಲ್ಲಿ ಗೊತ್ತಾಗಿದೆ. ಚುನಾವಣೆಗೆ ಬಿಜೆಪಿ ₹1,092.15 ಕೋಟಿ ಖರ್ಚು ಮಾಡಿದ್ದರೆ, ಕಾಂಗ್ರೆಸ್ ₹192.55 ಕೋಟಿ ವೆಚ್ಚ ಮಾಡಿದೆ. 2021–22ರಲ್ಲಿ ಬಿಜೆಪಿ ₹645.85 ಕೋಟಿ ಖರ್ಚು ಮಾಡಿತ್ತು.
ವಿವಾದಾತ್ಮಕ ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ, ಹಿಂದಿನ ಹಣಕಾಸು ವರ್ಷದಲ್ಲಿ ಚುನಾವಣಾ ಬಾಂಡ್‌ಗಳಿಂದ ಕಾಂಗ್ರೆಸ್ ಸಂಗ್ರಹಿಸಿದ ₹171.01 ಕೋಟಿಗೆ ಹೋಲಿಸಿದರೆ, ಬಿಜೆಪಿ ಸಂಗ್ರಹಿಸಿರುವುದು ₹1,294.14 ಕೋಟಿ. ಚುನಾವಣಾ ಬಾಂಡ್‌ಗಳು ಮುಖ್ಯವಾಗಿ ಆಡಳಿತ ಪಕ್ಷಕ್ಕೆ ಅನುಕೂಲಕರ ಎಂಬ ವಿರೋಧ ಪಕ್ಷದ ಆರೋಪಕ್ಕೆ ಈ ಅಂಕಿಅಂಶ ಹೆಚ್ಚು ಪುಷ್ಟಿ ನೀಡುತ್ತದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕಪರಿಶೋಧನಾ ವರದಿಯು, 2022–23ರಲ್ಲಿ ಬಿಜೆಪಿಯ ಒಟ್ಟು ಆದಾಯವು ₹1,917.12 ಕೋಟಿಯಿಂದ ₹2,360.84 ಕೋಟಿಗೆ ಏರಿರುವುದನ್ನು ಮತ್ತು ಕಾಂಗ್ರೆಸ್‌ನ ಆದಾಯ ಕೇವಲ ₹452.37 ಕೋಟಿ ಇರುವುದನ್ನು ತೋರಿಸಿದೆ. ಈ ಅವಧಿಯಲ್ಲಿ ಬಿಜೆಪಿ ಮಾಡಿರುವ ಖರ್ಚು ₹1,361.68 ಕೋಟಿ ಮತ್ತು ಕಾಂಗ್ರೆಸ್ ಮಾಡಿರುವ ಖರ್ಚು ₹467.13 ಕೋಟಿ.
ಒಟ್ಟು ಆದಾಯದಲ್ಲಿ, ಚುನಾವಣಾ ಬಾಂಡ್‌ಗಳ ಪಾಲು ಶೇ 54ರಷ್ಟಿದೆ. ₹ 2,120.06 ಕೋಟಿ ಬಿಜೆಪಿಗೆ ದೇಣಿಗೆಯಿಂದ ಬಂದಿದೆ. ಬ್ಯಾಂಕ್ ಬಡ್ಡಿಯಿಂದ ₹237.3 ಕೋಟಿ ದೊರೆತಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಬಡ್ಡಿ ಮೊತ್ತ ₹ 133.3 ಕೋಟಿ ಲಭಿಸಿತ್ತು.
ಚುನಾವಣೆಯಲ್ಲಿ ಬಿಜೆಪಿಯು ಜಾಹೀರಾತಿಗೆ ₹432.14 ಕೋಟಿ ವೆಚ್ಚ ಮಾಡಿದ್ದರೆ, ವಿಮಾನ ಮತ್ತು ಹೆಲಿಕಾಪ್ಟರ್ ಬಾಡಿಗೆಗೆ ₹78.22 ಕೋಟಿ ವಿನಿಯೋಗಿಸಿದೆ. ಹಾಗೆಯೇ ಅಭ್ಯರ್ಥಿಗಳಿಗೆ ಚುನಾವಣೆ ಎದುರಿಸಲು ₹75.05 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಪತ್ರಿಕಾಗೋಷ್ಠಿಗಳಿಗಾಗಿ ₹71.60 ಲಕ್ಷ ವೆಚ್ಚ ಮಾಡಿರುವುದಾಗಿ ಆಡಿಟ್ ವರದಿಯಲ್ಲಿ ತೋರಿಸಿದೆ.
2022-23ರಲ್ಲಿ ಬಿಜೆಪಿ ಹಳೆಯ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ₹15.59 ಲಕ್ಷಕ್ಕೆ ಮಾರಾಟ ಮಾಡಿದೆ. 2021-22 ರಲ್ಲಿ ಇದರಿಂದ ಬಂದ ಮೊತ್ತ ₹1.33 ಲಕ್ಷ ಮಾತ್ರ. ಆದರೆ, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಖರೀದಿಗೆ ಇದೇ ಅವಧಿಯಲ್ಲಿ ವಿನಿಯೋಗಿಸಿರುವ ಮೊತ್ತವನ್ನು ₹49.56 ಲಕ್ಷದಿಂದ ₹43.89 ಲಕ್ಷಕ್ಕೆ ತಗ್ಗಿಸಿದೆ.
ಬಿಜೆಪಿ ವೇತನಕ್ಕೆ ಮಾಡುತ್ತಿರುವ ವೆಚ್ಚವನ್ನು ₹47.96 ಕೋಟಿಯಿಂದ ₹46.54 ಕೋಟಿಗೆ ತಗ್ಗಿಸಿದೆ. ವಿದ್ಯುತ್ ಮತ್ತು ನೀರಿನ ಶುಲ್ಕ ಮಾತ್ರ ₹8 ಕೋಟಿಯಿಂದ ₹ 9.40 ಕೋಟಿಗೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.