
ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ತಿರುವನಂತಪುರ: ಕೇರಳದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಪರಿಣಾಮ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ತಿರುವನಂತಪುರ ಕಾರ್ಪೊರೇಷನ್ ವ್ಯಾಪ್ತಿಯ ತ್ರಿಕ್ಕಣ್ಣಾಪುರಂ ವಾರ್ಡ್ ನಿವಾಸಿ ಆನಂದ್ ಕೆ ಥಂಪಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಈಗಾಗಲೇ ತ್ರಿಕ್ಕಣ್ಣಾಪುರಂ ವಾರ್ಡ್‌ಗೆ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಆನಂದ್ ಹೆಸರನ್ನು ಅಂತಿಮ ಪಟ್ಟಿಯಿಂದ ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಆನಂದ್ ಅವರು ಸ್ನೇಹಿತರಿಗೆ ಕಳುಹಿಸಿರುವ ವಾಟ್ಸ್‌ಆ್ಯಪ್ ಸಂದೇಶಗಳು ಬೆಳಕಿಗೆ ಬಂದಿದ್ದು, ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವುದು ಕಂಡು ಬಂದಿದೆ.
ಆನಂದ್ ಅವರು ಪಕ್ಷದ ಟಿಕೆಟ್ ನಿರಾಕರಿಸಲು ಕೆಲವು ಬಿಜೆಪಿ ನಾಯಕರು ಕಾರಣ ಎಂದು ಆರೋಪಿಸಿದ್ದಾರೆ. ಜತೆಗೆ, ಕೆಲವು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಮರಳು ಮಾಫಿಯಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದೂ ದೂರಿದ್ದಾರೆ.
ತನಿಖೆಯ ಭಾಗವಾಗಿ ವಾಟ್ಸ್‌ಆ್ಯಪ್ ಸಂದೇಶಗಳ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.