ADVERTISEMENT

ಬಿಹಾರದಲ್ಲಿ ಈಗಿನ ಮೈತ್ರಿಯೊಂದಿಗೇ 2024ರ ಲೋಕಸಭೆ, 2025ರ ಚುನಾವಣೆ: ಅರುಣ್ ಸಿಂಗ್

ಐಎಎನ್ಎಸ್
Published 1 ಆಗಸ್ಟ್ 2022, 2:21 IST
Last Updated 1 ಆಗಸ್ಟ್ 2022, 2:21 IST
ಅರುಣ್ ಸಿಂಗ್
ಅರುಣ್ ಸಿಂಗ್   

ಪಟ್ನಾ: ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆ ಹಾಗೂ 2025ರ ವಿಧಾನಸಭೆ ಚುನಾವಣೆಯನ್ನು ಬಿಜೆಪಿಯು ಈಗಿನ ಮೈತ್ರಿಯೊಂದಿಗೇ ಎದುರಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ.

ಎರಡು ದಿನಗಳ ಕಾಲ ನಡೆದ ಬಿಜೆಪಿಯ ‘ಜಂಟಿ ರಾಷ್ಟ್ರೀಯ ಕಾರ್ಯಕಾರಿ ಸಭೆಯ (ಜೆಎನ್‌ಇಎಂ)’ ಸಮಾರೋಪದ ಬಳಿಕ ಭಾನುವಾರ ಮಾಧ್ಯಮದವರ ಜತೆ ಅವರು ಸಂವಾದ ನಡೆಸಿದ್ದಾರೆ.

‘ಬಿಜೆಪಿಯು ತನ್ನ ಮಿತ್ರರನ್ನು ಗೌರವಿಸುತ್ತದೆ. ಆದ್ದರಿಂದ ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆಯನ್ನು ಹಾಗೂ 2025ರ ವಿಧಾನಸಭೆ ಚುನಾವಣೆಯನ್ನು ಹಾಲಿ ಮಿತ್ರರೊಂದಿಗೇ ಎದುರಿಸಲಿದೆ’ ಎಂದು ಅವರು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಬಿಹಾರದಿಂದ ಚುನಾವಣಾ ಪ್ರಚಾರ ಅಭಿಯಾನ ಆರಂಭಿಸುವುದಾಗಿ ಬಿಜೆಪಿ ಘೋಷಿಸಿದೆ.

ರಾಜ್ಯದ ಪ್ರತಿಯೊಂದು ಸಮುದಾಯ, ಜಾತಿಯ ಜನರನ್ನು ಬೂತ್ ಮಟ್ಟದಲ್ಲಿ ಭೇಟಿಯಾಗಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಜೆಪಿ ನಾಯಕರಿಗೆ ಸೂಚಿಸಿರುವುದಾಗಿಯೂ ಅರುಣ್ ಸಿಂಗ್ ಮಾಹಿತಿ ನೀಡಿದ್ದಾರೆ.

ಬಿಹಾರದ 200 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಹಮ್ಮಿಕೊಳ್ಳಲಿರುವ ಪಕ್ಷದ ನಾಯಕರು, ಪಕ್ಷದ ಏಳು ಘಟಕಗಳು (ಮೋರ್ಚಾ) ಮಾಡಿರುವ ಕೆಲಸವನ್ನು ಜನತೆಯ ಮುಂದಿಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಪ್ರಚಾರ ಅಭಿಯಾನಕ್ಕೆ ಸಂಬಂಧಿಸಿ ಎರಡು ದಿನಗಳ ಸಭೆಯಲ್ಲಿ ಮುಖ್ಯವಾಗಿ ಚರ್ಚಿಸಲಾಗಿದೆ. ಉಳಿದಂತೆ ಶೋಷಿತರನ್ನು, ಬುಡಕಟ್ಟು ಸಮುದಾಯದವರನ್ನು, ದಲಿತರನ್ನು ಗೌರವಿಸುವ ಬಗ್ಗೆಯೂ ಚರ್ಚಿಸಿದ್ದೇವೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಸಲುವಾಗಿ ಬಿಜೆಪಿ ಕಾರ್ಯಕರ್ತರ ಪ್ರತಿ ಮನೆಗಳಲ್ಲಿಯೂ ತ್ರಿವರ್ಣಧ್ವಜ ಆರೋಹಣ ಮಾಡಲು ನಿರ್ಧರಿಸಿದ್ದೇವೆ’ ಎಂದು ಅರುಣ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.