ADVERTISEMENT

₹10 ಕೋಟಿಗೆ ಎಎಪಿ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಬಿಜೆಪಿ:ಮನೀಶ್ ಸಿಸೋಡಿಯಾ

​ಪ್ರಜಾವಾಣಿ ವಾರ್ತೆ
Published 1 ಮೇ 2019, 14:38 IST
Last Updated 1 ಮೇ 2019, 14:38 IST
   

ದೆಹಲಿ: ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ 40 ಶಾಸಕರು ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ.ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಕೂಡಲೇ ಟಿಎಂಸಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದರು.

ಮೋದಿ ಹೇಳಿಕೆಯ ನಂತರ ಇದೀಗ ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಖರೀದಿ ಮಾಡಲು ಯತ್ನಿಸುತ್ತಿದೆ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ. ತಲಾ ₹10 ಕೋಟಿ ನೀಡಿ ಏಳು ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಯತ್ನಿಸಿದೆ ಎಂದಿದ್ದಾರೆಸಿಸೋಡಿಯಾ.

ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಹೇಳಿದ ಅವರು, ಈ ಹಿಂದೆಯೂ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸಿತ್ತು.ಆದರೆ ಅವರಿಗೆ ರಾಜ್ಯದ ಜನರೇ ತಕ್ಕ ಉತ್ತರ ನೀಡಿದ್ದರು ಎಂದಿದ್ದಾರೆ.

ADVERTISEMENT

ಬಿಜೆಪಿಗೆ ಯಾವುದೇ ಸಮಸ್ಯೆಗಳ ಬಗ್ಗೆ ಹೇಳಲು ಇಲ್ಲದೇ ಇರುವಾಗ ಅವರು ಕುದುರೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ತಲಾ ₹10 ಕೋಟಿ ನೀಡಿ ಅವರು ನಮ್ಮ7 ಶಾಸಕರನ್ನು ಖರೀದಿಸಲು ಯತ್ನಿಸಿದ್ದಾರೆ ಎಂದು ಸಿಸೋಡಿಯಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಪಶ್ಚಿಮ ಬಂಗಾಳ ಸೆರಾಂಪೋರ್‌ನಲ್ಲಿ ಮೋದಿ ಮಾಡಿದ ಭಾಷಣ ಖಂಡಿಸಿದ ಸಿಸೋಡಿಯಾ, ಪ್ರಧಾನಿಯೊಬ್ಬರು ಈ ರೀತಿ ಮಾತನಾಡಿದ್ದು ಸರಿಯಲ್ಲ.ಪ್ರಧಾನಿಯವರಿಗೆ ಇಂತಾ ಮಾತುಗಳು ಶೋಭೆ ತರುವುದಿಲ್ಲ.ಭಾರತ ಪ್ರಜಾಪ್ರಭುತ್ವದ ದೇಶ ಮತ್ತು ಪ್ರಜಾಪ್ರಭುತ್ವದ ಕಾರಣವೇ ಮೋದಿ ಇಲ್ಲಿರುವುದು ಎಂದಿದ್ದಾರೆ.

ಆದಾಗ್ಯೂ, ಎಎಪಿ ಆರೋಪವನ್ನು ನಿರಾಕರಿಸಿದ ಬಿಜೆಪಿ ಗಮನ ಸೆಳೆಯುವುದಕ್ಕಾಗಿ ಎಎಪಿ ಈ ರೀತಿಯ ಆರೋಪಗಳನ್ನು ಮಾಡುತ್ತಿದೆ ಎಂದು ಬಿಜೆಪಿ ಮಾಧ್ಯಮ ಮುಖ್ಯಸ್ಥ ಅಶೋಕ್ ಗೋಯಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.